ಬಾಲ್ಯವಿವಾಹ ತಡೆಗಟ್ಟಲು ಸಹಕರ ನೀಡಿ: ಸಾರ್ವಜನಿಕರಿಗೆ ಡಾ.ಆರ್.ಸೆಲ್ವಮಣಿ ಮನವಿ

8-klr-13
Published on

ಕೋಲಾರ: ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ, ತಮ್ಮ ಸುತ್ತ ಬಾಲ್ಯವಿವಾಹ ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಾಲ್ಯವಿವಾಹ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಪಂ ಹಾಗೂ ತಾಲೂಕು ಮಟ್ಟದಲ್ಲಿ ಬಾಲ್ಯವಿವಾಹ ತಡೆಯಲು ಸಂಬಂಧ ಸಭೆಗಳನ್ನು ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಸೂಚಿಸಿದರು.

ಬಾಲ್ಯವಿವಾಹ ನಡೆಯುವುದು ಅಕ್ಕ ಪಕ್ಕ ಮನೆಯವರಿಗೆ ತಿಳಿದಿರುತ್ತದೆ. ಆದರೆ ಮಾಹಿತಿ ನೀಡಲು ಮುಂದೆ ಬರುತ್ತಿಲ್ಲವಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಬಾಲ್ಯವಿವಾಹದ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಜತೆಗೆ ಮಾಹಿತಿದಾರರ ವಿವರ ಗೌಪ್ಯವಾಗಿಡುವ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕರೊನಾ ಹಿನ್ನೆಲೆಯಲ್ಲಿ ಮಕ್ಕಳ ಅಪೌಷ್ಟಿಕತೆ ಬಗ್ಗೆ ಹೆಚ್ಚು ಹೆಚ್ಚು ನಿಗಾ ಇಡಬೇಕು. ಅಪೌಷ್ಠಿಕ ಮಕ್ಕಳನ್ನು ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲಾಯಿಸಿ ಪೌಷ್ಟಿಕ ಆಹಾರ ಮತ್ತು ಸೂಕ್ತ ಚಿಕಿತ್ಸೆ ನೀಡಬೇಕು. ಎನ್‌ಆರ್‌ಸಿ ಕೇಂದ್ರಗಳಲ್ಲಿ ದಾಖಲಾಗುವ ಮಕ್ಕಳ ತಾಯಂದಿರಿಗೆ ನರೇಗಾ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಂ.ಜಿ.ಪಾಲಿ ಮಾತನಾಡಿ, ಜಿಲ್ಲೆಯಲ್ಲಿ 2021 ಏಪ್ರಿಲ್‌ರಿಂದ ಇದೂವರೆಗೆ 62 ಬಾಲ್ಯವಿವಾಹ ಪ್ರಕರಣ ದಾಖಲಾಗಿದ್ದು, 8 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಉಳಿದವುಗಳನ್ನು ತಡೆಯುವಲ್ಲಿ ಸಫಲರಾಗಿದ್ದೇವೆ ಎಂದರು.

ಜಿಲ್ಲೆಯಲ್ಲಿ ಒಟ್ಟು 3542 ಅಪೌಷ್ಟಿಕ ಮಕ್ಕಳಿದ್ದಾರೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಜೀವಂತ ಹೆರಿಗೆಗೆ 3 ಕಂತುಗಳಲ್ಲಿ 5,000 ಹೆರಿಗೆ ಭತ್ಯೆಯನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 52,026 ವಿಧವೆಯರು ನೋಂದಣಿಯಾಗಿದ್ದು, ಅವರಿಗೆ ಮಾಸಾಶನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಜಗದೀಶ್ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net