

|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಮಾತು ಕೇಳದ ಅಧಿಕಾರಿಗಳ ಪಟ್ಟಿ ಮಾಡಿಕೊಡಲು ಬಿಜೆಪಿ ಶಾಸಕರಿಗೆ ಪಕ್ಷದಿಂದ ಸೂಚನೆ ರವಾನೆ ಯಾಗಿರುವ ಮಹತ್ವದ ಬೆಳವಣಿಗೆ ನಡೆದಿದೆ. ಆಡಳಿತ ಪಕ್ಷದ ಶಾಸಕರನೇಕರು ಅಸಮಾಧಾನ ಹೊರಹಾಕಿದ್ದು, ತಮಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಇದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಮುಖ ನಾಯಕರ ಮುಂದೆ ಗೋಳು ತೋಡಿಕೊಂಡಿದ್ದಾರೆ.
ಸಂಪುಟದ ಕೆಲ ಸದಸ್ಯರ ವಿರುದ್ಧ ಪಕ್ಷದ ಶಾಸಕರದ್ದೇ ಆಕ್ರೋಶ ಹರಳುಗಟ್ಟುವುದನ್ನು ಸೂಕ್ಷ್ಮವಾಗಿ ಗುರುತಿಸಿರುವ ಹಿರಿಯ ನಾಯಕರು, ಅದಕ್ಕೆ ಪರಿಹಾರ ಕ್ರಮವಾಗಿ ಮತ್ತು ಶಾಸಕರ ಬೇಸರ ತಣಿಸಲು ಪ್ರಯತ್ನ ನಡೆಸಿದ್ದಾರೆ. ಇದರ ಭಾಗವಾಗಿಯೇ ಅಧಿಕಾರಿಗಳ ಕುರಿತ ಬಿಕ್ಕಟ್ಟು ಪರಿಹರಿಸಲು ದೂರು ಆಹ್ವಾನಿಸಿದ್ದಾರೆಂದು ಗೊತ್ತಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ತಮಗೆ ಸ್ಪಂದಿಸದೇ ಹೋದಲ್ಲಿ ಅಂಥವರ ಹೆಸರು ಕೊಡಿ ಎಂದು ಸೂಚಿಸಿದ್ದು, ಬಳಿಕ ಈ ಅಧಿಕಾರಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರ ಸಮ್ಮುಖದಲ್ಲಿಟ್ಟು ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಹಾಗೆಯೇ ಅಧಿಕಾರಿಗಳ ಪಟ್ಟಿ ಬಂದ ಬಳಿಕ ಮುಂದೇನು ಮಾಡಬೇಕೆಂಬ ಬಗ್ಗೆ ಚರ್ಚೆ ಮಾಡಿ ತೀರ್ವನಿಸಲಾಗುತ್ತದೆ ಎನ್ನಲಾಗಿದೆ.
ಚುನಾವಣೆ ವರ್ಷ ಆರಂಭವಾಗುವ ಮೊದಲು ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸ ಮಾಡಲು ಹಣ ಬಿಡುಗಡೆ ಮಾಡಿಸಿಕೊಳ್ಳುವುದು ಮತ್ತು ಸ್ಥಳೀಯ ಆಡಳಿತ ಯಂತ್ರದಲ್ಲಿ ವೇಗ ತರುವುದು ಆಡಳಿತ ಪಕ್ಷದ ಶಾಸಕರ ಪ್ರಮುಖ ಬೇಡಿಕೆ. ಇದೇ ಕೋರಿಕೆಯನ್ನು ಸಿಎಂ ಕಿವಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ವಲಸಿಗ ಸಚಿವರೊಬ್ಬರ ವಿರುದ್ಧ ಧ್ವನಿ: ಇನ್ನೊಂದು ಬೆಳವಣಿಗೆಯಲ್ಲಿ ವಲಸಿಗ ಸಚಿವರೊಬ್ಬರ ವಿರುದ್ಧ ಶಾಸಕರು ಮತ್ತು ಸಂಪುಟ ಸಹೋದ್ಯೋಗಿಗಳು ದನಿ ಎತ್ತಿದ್ದು, ಇದನ್ನು ತಣ್ಣಗಾಗಿಸಲು ಪಕ್ಷ ಪರಿಹಾರ ಹುಡುಕಲಾರಂಭಿಸಿದೆ. ದೂರವಾಣಿ ಕರೆ ಸ್ವೀಕರಿಸದೇ ಇರುವುದು, ಕ್ಷೇತ್ರದ ಕೆಲಸ ಮಾಡಿಕೊಡದೇ ಇರುವ ಬಗ್ಗೆ ಹಲವು ಶಾಸಕರು ಬಹಿರಂಗವಾಗಿ ದನಿ ಎತ್ತಿದ್ದಾರೆ. ಕೇವಲ ವಲಸಿಗರಿಂದ ಸರ್ಕಾರವಲ್ಲ, 104 ಬಿಜೆಪಿ ಶಾಸಕರಿಂದಲೂ ಸರ್ಕಾರ ಎಂಬ ವಾದ ಪುನಃ ಮುನ್ನೆಲೆಗೆ ಬಂದಿದೆ. ಸಚಿವರಾದವರು ಆಡಳಿತ ಪಕ್ಷದ ಶಾಸಕರ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿಕೊಡಬೇಕು, ಆದರೆ ಈಗ ಹಲವು ಸಚಿವರಿಂದ ಸ್ಪಂದನೆಯೇ ಸಿಗುತ್ತಿಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲೂ ದೂರು ಕೇಳಿಬಂದಿತ್ತು.