

ಮಾಸ್ಕೋ: ಪಾಲಕರಿಗೂ ತಿಳಿಯದಂತೆ ರಾತ್ರಿ ನಿದ್ರೆಯಲ್ಲಿ ನಡೆದು ಹೋದ ಮೂರು ವರ್ಷದ ಮಗು ಬೆಳಗಾಗುವಷ್ಟರಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ರಷ್ಯಾದಲ್ಲಿ ಶುಕ್ರವಾರ ನಡೆದಿದೆ. ಮೈನಸ್ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ತನ್ನ ಮನೆಯಲ್ಲಿ ತುಂಬಾ ಚಳಿಯಿಂದಾಗಿ ಪಾಲಕರ ಅರಿವಿಗೂ ಬಾರದೇ ಮಗು ಮೃತಪಟ್ಟಿದೆ.
ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮಗು ಏಂಜಲಿನಾ ಮೃತದೇಹ ಮನೆಯ ಮುಖ್ಯ ದ್ವಾರದ ಮುಂದೆ ಬಿದ್ದಿತ್ತು ಎಂದು ತಾಯಿ ಸ್ವೆಟ್ಲಾನಾ ಕುಲೆಶೋವಾ (23) ಕಣ್ಣೀರಿಟ್ಟಿದ್ದಾರೆ. ಅಂದಹಾಗೆ ಈ ದುರಂತ ರಷ್ಯಾದ ದಕ್ಷಿಣದಲ್ಲಿರುವ ಸಟ್ಕಾ ಪಟ್ಟಣದಲ್ಲಿ ನಡೆದಿದೆ. ದುರಂತ ನಡೆಯು ಮುನ್ನ ರಾತ್ರಿ ಏಜೆಂಲಿನಾ ಕುಟುಂಬ ಕಿರಿಯ ಮಗಳ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿತ್ತು.
ಈ ಬಗ್ಗೆ ಮಾತನಾಡಿರುವ ತಾಯಿ ಸ್ವೆಟ್ಲಾನಾ, ನಾನು ಏಜಂಲಿನಾಳನ್ನು ಬೆಡ್ ಮೇಲೆ ಮಲಗಿಸಿದೆ. ಬಳಿಕ ನಾನು ಮತ್ತು ಪತಿ ಸ್ವಲ್ಪ ಸಮಯ ಟಿವಿ ನೋಡಿ ಮಧ್ಯರಾತ್ರಿ ಮಲಗಲು ಹೋದೆವು. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಬೆಡ್ ಮೇಲೆ ಮಗಳು ಇರಲಿಲ್ಲ. ಬಳಿಕ ಆಕೆ ಮನೆಯ ಹಾಲ್ನಲ್ಲಿ ಶವವಾಗಿ ಪತ್ತೆಯಾದಳು ಎಂದಿದ್ದಾರೆ.
ಏಂಜಲಿನಾಗೆ ನಿದ್ರೆಯಲ್ಲಿ ನಡೆಯುವ ಕೆಟ್ಟ ಹವ್ಯಾಸ ಇತ್ತು. ನಾವು ಅನೇಕ ಬಾರಿ ಆಕೆಯನ್ನು ಮರಳಿ ಬೆಡ್ ಮೇಲೆ ತಂದು ಮಲಗಿಸಿದ್ದೇವೆ. ಆದರೆ, ಆ ರಾತ್ರಿ ಮಾತ್ರ ಆಕೆಯ ಕೋಣೆಯಿಂದ ಹೊರ ಹೋಗಿದ್ದನ್ನು ಯಾರು ಗಮನಿಸಲಿಲ್ಲ ಎಂದಿದ್ದಾರೆ. ನಿದ್ರೆಯಲ್ಲಿ ನಡೆದುಕೊಂಡು ಮನೆಯ ಸಭಾಂಗಣಕ್ಕೆ ತೆರಳಿದ್ದಾಳೆ. ಮೊದಲೇ ಆ ಪ್ರದೇಶ ಬಿಸಿಯಾಗಿರದೆ ತುಂಬಾ ಶೀತದಿಂದ ಕೂಡಿತ್ತು. ಕತ್ತಲಾಗಿದ್ದರಿಂದ ವಾಪಸ್ಸು ಬರಲು ದಾರಿ ತಿಳಿಯದೇ ಚಳಿಯಿಂದ ಅಲ್ಲಿಯೇ ಮೃತಪಟ್ಟಿರಬಹುದೆಂದು ತಾಯಿ ಅಂದಾಜಿಸಿದ್ದಾರೆ.
ಆ ರಾತ್ರಿ ಯಾವುದೇ ಶಬ್ದವೂ ಸಹ ನನಗೂ ಮತ್ತು ಪತಿಗೂ ಕೇಳಲಿಲ್ಲ ಎಂದು ಸ್ವೆಟ್ಲಾನಾ ಹೇಳಿದ್ದಾರೆ. ಪಾಲಕರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ತಾಯಿಯ ವಿರುದ್ಧ ಪೊಲೀಸರು ಕ್ರಮಿನಲ್ ಕೇಸು ದಾಖಲಿಸಿದ್ದು, ಆರೋಪ ಸಾಬೀತಾದರೆ ತಾಯಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಗು ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೈನಸ್ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತೆಂದು ತಿಳಿದುಬಂದಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮುಂದೇ ಏನಾಗಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)