

ಕಾಸರಗೋಡು: ಫುಡ್ ಪಾಯಿಸನ್ನಿಂದಾಗಿ ಕೇರಳದಲ್ಲಿ ಮತ್ತೊಬ್ಬ ಯುವತಿ ಮೃತಪಟ್ಟಿದ್ದಾಳೆ. ಮೃತ ಯುವತಿಯನ್ನು ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಪಾರ್ವತಿ ಎಂದು ಗುರುತಿಸಲಾಗಿದೆ.
ಉದುಮದಲ್ಲಿರುವ ಹೋಟೆಲ್ ಒಂದರಲ್ಲಿ ಆನ್ಲೈನ್ ಮೂಲಕ ಕುಜಿಮಂತಿ ಹೆಸರಿನ ಚಿಕನ್ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಪುಡ್ ಪಾಯಿಸನ್ನಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಉದುಮದಲ್ಲಿರುವ ರೊಮ್ಯಾನ್ಸಿಯಾ ಹೋಟೆಲ್‌ನಿಂದ ಆಹಾರ ಪದಾರ್ಥ ಖರೀದಿಸಲಾಗಿತ್ತು. ಅಂಜು ಜೊತೆಗೆ ಊಟ ಮಾಡಿದ ಸ್ನೇಹಿತರಿಗೂ ಫುಡ್ ಪಾಯಿಸನ್ ಆಗಿದ್ದು, ಅವರು ಕೂಡ ಅಸ್ವಸ್ಥರಾಗಿದ್ದಾರೆ ಎಂದು ಉದುಮ ಶಾಸಕ ಸಿ.ಎಚ್.ಕುಂಜಂಬು ಮಾಹಿತಿ ನೀಡಿದ್ದಾರೆ. ಈ ಘಟನೆ ಆರೋಗ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸಿದ್ದಾರೆ.
ಅಂಜುಶ್ರೀ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಕಾಸರಗೋಡು ಮತ್ತು ಕಣ್ಣೂರಿನ ಅಧಿಕಾರಿಗಳು ಹೋಟೆಲ್‌ಗೆ ಭೇಟಿ ನೀಡಿ ಸಾವಿಗೆ ಕಾರಣ 'ಕುಜಿಮಂತಿ'ಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಸಂಬಂಧಪಟ್ಟ ಹೋಟೆಲ್‌ನಲ್ಲಿರುವ ನೀರು ಮತ್ತು ಆಹಾರವನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಇದು ಎರಡನೇ ಫುಡ್ ಪಾಯಿಸನ್ ಸಾವಾಗಿದೆ. ಕೊಟ್ಟಾಯಂ ಮೂಲದ ರಶ್ಮಿ ಅವರು ‘ಅಲ್ಫಾಹಮ್’ ಸೇವಿಸಿ ಸೋಮವಾರ ಮೃತಪಟ್ಟಿದ್ದರು. ಅಲ್ಲದೆ ಇತ್ತೀಚೆಗೆ ಕಾಸರಗೋಡಿನಲ್ಲಿ ದೇವಾನಂದ ಎಂಬ ಬಾಲಕಿ ಶವರ್ಮಾ ತಿಂದು ಸಾವನ್ನಪ್ಪಿದ್ದಳು. ಕೇರಳದ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿದ್ದು, ಜನರನ್ನು ಆತಂಕಕ್ಕೆ ದೂಡಿದೆ. (ಏಜೆನ್ಸೀಸ್)