

ಪಾಲ್ಗರ್ : ಮಕ್ಕಳಿಗೆ ಬರ್ತ್ಡೇ ಆಚರಿಸಿಕೊಳ್ಳುವುದು, ಉಡುಗೊರೆ ಪಡೆಯುವುದು ಅಂದ್ರೆ ಸಹಜವಾಗಿ ತುಂಬಾ ಖುಷಿಯ ಸಂಗತಿ. ಆದರೆ ಏಪ್ರಿಲ್ 10 ರಂದು 6 ವರ್ಷ ತುಂಬಿದ ಮಹಾರಾಷ್ಟ್ರದ ಬಾಲಕಿಯೊಬ್ಬಳು ಪುಟ್ಟ ವಯಸ್ಸಲ್ಲೇ ದೊಡ್ಡ ಮನಸ್ಸಿನ ಕೆಲಸಕ್ಕೆ ನಾಂದಿ ಹಾಡಿದ್ದಾಳೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಬಂಧುಬಳಗದವರಿಂದ ರಕ್ತದಾನ ಮಾಡಿಸಿ ಗಮನ ಸೆಳೆದಿದ್ದಾಳೆ.
ರಾಜ್ಯದ ಪಾಲ್ಗರ್ ಜಿಲ್ಲೆ ವಾಡಾ ತಾಲ್ಲೂಕಿನ ಗಾಂದ್ರೆ ಗ್ರಾಮದ ನಿವಾಸಿ ಯುಗಾ ಅಮೋಲ್ ಠಾಕ್ರೆ ಟಿವಿಯಲ್ಲಿ ರಕ್ತದಾನ ಮಾಡಲು ಕೋರಿ ಬರುತ್ತಿದ್ದ ಮನವಿಗಳಿಂದ ತುಂಬಾ ಪ್ರೇರಿತಳಾಗಿದ್ದಾಳೆ. ಹಾಗಾಗಿ ತನ್ನ ಹುಟ್ಟಿದ ಹಬ್ಬಕ್ಕೆ 'ನನಗೆ ಪಾರ್ಟಿ ಬೇಡ, ಉಡುಗೊರೆಗಳನ್ನೂ ನೀಡಬೇಡಿ. ಬದಲಿಗೆ ರಕ್ತದಾನ ಮಾಡಿ ಕೋವಿಡ್ ಸಮಸ್ಯೆಯ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅಭಾವವುಂಟಾಗುವುದನ್ನು ತಪ್ಪಿಸಿ' ಎಂದು ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.
ಅವಳ ಕುಟುಂಬಸ್ಥರು, ಸಂಬಂಧಿಕರು ಮತ್ತು ಮಿತ್ರವರ್ಗದವರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟು 36 ಜನರು ಪಾಲ್ಗರ್ನ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ ಎಂದು ಆಸ್ಪತ್ರೆಯ ಮಾಲೀಕರಾದ ಡಾ. ವೈಭವ್ ಠಾಕ್ರೆ ತಿಳಿಸಿದ್ದಾರೆ.
"ಇಷ್ಟು ಚಿಕ್ಕ ವಯಸ್ಸಲ್ಲಿ ಇಂಥಾ ಆಲೋಚನೆ ಮಾಡಿರುವುದು ನಿಜಕ್ಕೂ ವಿಶೇಷ. ನಮಗೆ ಅವಳ ಬಗ್ಗೆ ಹೆಮ್ಮೆ ಉಂಟಾಗಿದೆ" ಎಂದಿರುವ ಡಾ.ಠಾಕ್ರೆ, ಶೇಖರಿಸಲ್ಪಟ್ಟ ರಕ್ತವನ್ನು ಥಾಣೆ ಜಿಲ್ಲೆಯ ವಾಮನರಾವ್ ಓಕ್ ಬ್ಲಡ್ ಬ್ಯಾಂಕ್ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)