

ನ್ಯೂಯಾರ್ಕ್: ಟಿಕ್ಟಾಕ್ನಲ್ಲಿ ಹೊಸ ಚಾಲೆಂಜ್ ಸ್ವೀಕರಿಸಿದ ಹದಿನೈದು ವರ್ಷದ ಹುಡುಗಿಯೊಬ್ಬಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಅಮೆರಿಕದ ಒಕ್ಲಾಹೋಮದಲ್ಲಿ ನಡೆದಿದೆ.
ಚ್ಲೋ ಫಿಲಿಪ್ಸ್ (15) ಮೃತ ಹುಡುಗಿ. ಆಗಸ್ಟ್ 21ರಂದು ಸಾವಿಗೀಡಾಗಿದ್ದು, ಇಂಥದ್ದೇ ಮತ್ತೊಂದು ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹುಡುಗಿಯ ಪಾಲಕರು ತಮ್ಮ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆನಡ್ರಿಲ್ (Benadryl Challenge) ಹೆಸರಿನ ಹೊಸ ಚಾಲೆಂಜ್ ಅನ್ನು ಹುಡುಗಿ ಸ್ವೀಕರಿಸಿದ್ದಳು. ಇದರಲ್ಲಿ ಭಾಗವಹಿಸುವ ಸ್ಪರ್ಧಾಳುಗಳನ್ನು ಅತಿಯಾಗಿ ಅಲರ್ಜಿ ಔಷಧವನ್ನು ಸೇವಿಸುವಂತೆ ಪ್ರೇರಿಪಿಸಲಾಗುತ್ತದೆ. ಅದರಂತೆ ಮಿತಿಮೀರಿದ ಔಷಧ ಸೇವಿಸಿದ ಹುಡುಗಿ ಕೊನೆಗೆ ಸಾವಿಗೀಡಾಗಿದ್ದಾಳೆ. ಇದರ ಬೆನ್ನಲ್ಲೇ ಹುಡುಗಿಯ ಕುಟುಂಬದವರು ನೋವಿನಲ್ಲೇ ತಮ್ಮ ಸಂಬಂಧಿಗಳಿಗೆ ಮಕ್ಕಳ ಮೇಲೆ ಎಚ್ಚರವಿರಲಿ ಎಂದಿದ್ದಾರೆ.
ಘಟನೆ ಸುದ್ದಿಯಾಗುತ್ತಿದ್ದಂತೆ ಮಕ್ಕಳಿಗೆ ಎಚ್ಚರಿಕೆ ನೀಡಿರುವ ಒಕ್ಲೊಹೋಮದ ವಿಷ ಮತ್ತು ಔಷಧ ಮಾಹಿತಿ ಕೇಂದ್ರದ ನಿರ್ದೇಶಕರಾದ ಸ್ಕಾಟ್ ಶಾಪರ್ ಇಂತಹ ಅಪಾಯಕಾರಿ ಚಾಲೆಂಜ್ಗಳನ್ನು ಸ್ವೀಕರಿಸಬೇಡಿ ಎಂದಿದ್ದಾರೆ.
ಇನ್ನು ಹೆಚ್ಚು ಪ್ರಮಾಣ ಬೆನಡ್ರಿಲ್ ಔಷಧ ಸೇವನೆ ಅನೇಕ ರೋಗಳಿಗೆ ಕಾರಣವಾಗಬಹುದು ಅದರಲ್ಲೂ ಹೃದಯಕ್ಕೆ ಹೆಚ್ಚು ತೊಂದರೆಯಾಗಲಿದೆ. ಹೆಚ್ಚು ಸೇವನೆಯಿಂದ ಹೃದಯವು ತನ್ನ ಲಯದಿಂದ ಹೊರಬರಲು ಒಲವು ತೋರುತ್ತದೆ. ಅಲ್ಲದೆ, ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)