

ಓಡಿಶಾ: ಗಾಯಾಳು ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಾಲಕಿಯೊಬ್ಬಳು 35 ಕಿಲೋಮೀಟರ್ ಸೈಕಲ್ ತುಳಿದಿರುವ ಘಟನೆ ಓಡಿಶಾದ ಭದ್ರಕ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯು ಅಕ್ಟೋಬರ್ 23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತನ್ನ ತಂದೆಯನ್ನು ಆಸ್ಪತ್ರೆಯಿಂದ ವಾಪಸ್ ಮನೆಗೆ ಕರೊದೊಯ್ಯುತ್ತಿದ್ದ ವೇಳೆ ಪತ್ರಕರ್ತರೊಬ್ಬರು ಆಕೆಯನ್ನು ಮಾತನಾಡಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಭದ್ರಕ್ ಜಿಲ್ಲೆಯ ನಾಡಿಗನ್ ಗ್ರಾಮದ ನಿವಾಸಿ ಸುಜಾತ ಸೇಥಿ ಅಕ್ಟೋಬರ್ 22ರಂದು ಗುಂಪುಘರ್ಷಣೆಯಲ್ಲಿ ಗಾಯಗೊಂಡಿದ್ದ ತನ್ನ ತಂದೆಯನ್ನು ತಮ್ಮ ಊರಿನಿಂದ ಸುಮಾರು 14 ಕಿಲೋಮೀಟರ್ ಧಾಮ್ನಗರದ ಬಳಿ ಇರುವ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಬಳಿಕ ಅಲ್ಲಿನ ಸಿಬ್ಬಂದಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವ ಕಾರಣ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.
ಆ್ಯಂಬುಲೆನ್ಸ್ ಅಥವಾ ಖಾಸಗಿ ವಾಹನಕ್ಕೆ ಬಾಡಿಗೆ ನೀಡಲು ಹಣವಿಲ್ಲದ ಕಾರಣ ಸುಜಾತಾ ತನ್ನ ಬಳಿ ಇದ್ದ ಸೈಕಲ್ ಟ್ರಾಲಿ ಮೂಲಕ ಸುಮಾರು 35 ಕಿಲೋಮೀಟರ್ ದೂರ ಕ್ರಮಿಸಿ ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ. ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದು, ವೈದ್ಯರು ಒಂದು ವಾರ ಬಿಟ್ಟು ಬರುವಂತೆ ಸೂಚಿಸಿದ್ದಾರೆ. ಇದಕ್ಕಾಗಿ ವಾಪಸ್ ತೆರಳುತ್ತಿರುವುದಾಗಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ ಭದ್ರಕ್ ಕ್ರೇತ್ರದ ಶಾಸಕ ಅಗತ್ಯ ನೆರವನ್ನು ಘೋಷಿಸಿದ್ದಾರೆ. ಇದಲ್ಲದೆ ಬಾಲಕಿಗೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.