ಗಿಗ್ ಕಾರ್ವಿುಕರಿಗೆ ಗಿಫ್ಟ್; 2.30 ಲಕ್ಷ ಅಸಂಘಟಿತ ನೌಕರರಿಗೆ ಸಿಗಲಿದೆ ವಿಮೆ

gig workers
Published on

ಬೆಂಗಳೂರು: ರಾಜ್ಯ ಸರ್ಕಾರ ಗಿಗ್ ಕಾರ್ವಿುಕರಿಗೆ ‘ಜೀವನ ಭದ್ರತೆ, ಕುಟುಂಬ ನೆಮ್ಮದಿ’ಯ ಉಡುಗೊರೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಿಸಿದ್ದ ‘ರಾಜ್ಯ ಗಿಗ್ ಕಾರ್ವಿುಕರ ವಿಮಾ ಯೋಜನೆ’ ಬಗ್ಗೆ ರಾಜ್ಯಪತ್ರ (ಗೆಜೆಟ್) ಹೊರಡಿಸಲಾಗಿದ್ದು, ಸೆ. 7ರಿಂದಲೇ ಈ ಯೋಜನೆ ಜಾರಿಯಾಗಿದೆ. ಯೋಜನೆಯ ಸುಗಮ, ಸುಸೂತ್ರ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಸ್ವಿಗ್ಗಿ, ಜೊಮ್ಯಾಟೋ ಇತ್ಯಾದಿ ಆಹಾರ ವಿಲೇವಾರಿ ಮಾಡುವವರು, ಅಮೆಜಾನ್, ಫ್ಲಿಪ್​ಕಾರ್ಟ್, ಬಿಗ್ ಬಾಸ್ಕೆಟ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ ಅರೆಕಾಲಿಕ ಡೆಲಿವರಿ ಸಿಬ್ಬಂದಿ ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಬೆಂಗಳೂರು ಮಹಾನಗರ ಸೇರಿ ರಾಜ್ಯದೆಲ್ಲೆಡೆ ಪ್ಲಾಟ್​ಫಾಮ್ರ್ ಆಧಾರಿತ ಗಿಗ್ ಕಾರ್ವಿುಕರ ಸಮೀಕ್ಷೆ ಈವರೆಗೆ ನಡೆದಿಲ್ಲ. ಆದರೆ ಕೇಂದ್ರ ಸರ್ಕಾರದ ನೀತಿ ಆಯೋಗದ 2022ರ ವರದಿ ಪ್ರಕಾರ ರಾಜ್ಯದಲ್ಲಿ 2.30 ಲಕ್ಷ ಗಿಗ್ ಕಾರ್ವಿುಕರಿದ್ದಾರೆ. ಈ ಎಲ್ಲರಿಗೂ ಯೋಜನೆ ಅನ್ವಯವಾಗಲಿದೆ.

ನಾಲ್ಕು ಲಕ್ಷ ರೂ. ವಿಮೆ: ಗಿಗ್ ಕಾರ್ವಿುಕರು ಅಸಂಘಟಿತ ವಲಯಕ್ಕೆ ಸೇರಿದವರು. ಈಗಿನ ಕಾರ್ವಿುಕ ಕಾಯ್ದೆಗಳಡಿ ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಹಕರಿಗೆ ಸರಕು ಅಥವಾ ಸೇವೆಗಳನ್ನು ನಿಗದಿತ ಸಮಯಕ್ಕೆ ತಲುಪಿಸುವ ಸವಾಲು ಈ ಕಾರ್ವಿುಕರದ್ದು. ಇಂತಹ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಅಪಘಾತದಿಂದ ಮರಣ ಇಲ್ಲವೇ ಅಂಗವಿಕಲರಾದರೆ ಅವರ ಅವಲಂಬಿತ ಕುಟುಂಬದ ಬದುಕು ದುರ್ಬರವಾಗಲಿದೆ. ಹೀಗಾಗಿ ಗಿಗ್ ಕಾರ್ವಿುಕರು ಮತ್ತವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ‘ವಿಮಾ ಯೋಜನೆ’ಯ ಗುರಿಯಾಗಿದೆ. ತಲಾ ಎರಡು ಲಕ್ಷ ರೂ.ಗಳ ಜೀವ ಮತ್ತು ಅಪಘಾತ ಸೇರಿ ಒಟ್ಟು ನಾಲ್ಕು ಲಕ್ಷ ರೂ. ವಿಮೆ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ.

ಅಸಂಘಟಿತ ಕಾರ್ವಿುಕರ ಭದ್ರತಾ ಮಂಡಳಿಯ ಮೂಲಕ ಈ ಯೋಜನೆಗೆ ಜಾರಿಗೊಳಿಸಿದ್ದು, ವಿಮೆ ಸೌಲಭ್ಯಕ್ಕೆ ತಗುಲುವ ನಾಲ್ಕು ಲಕ್ಷ ರೂ.ಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ.

ಗಿಗ್ ಕಾರ್ವಿುಕರು ಎಂದರೆ ಯಾರು?

ಎಲ್ಲ ತುಂಡುಗುತ್ತಿಗೆ ದರದ ಕೆಲಸವೂ ಸೇರಿ ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿನ ಚಟುವಟಿಕೆ ಗಳಿಂದ ಆದಾಯ ಗಳಿಸುವ ವ್ಯಕ್ತಿಗಳನ್ನು ಗಿಗ್ ಕಾರ್ವಿುಕರೆಂದು ಗುರುತಿಸಲಾಗುತ್ತದೆ. ನಿರ್ದಿಷ್ಟ ದರ ಪಾವತಿಸುವ ಒಪ್ಪಂದದ ನಿಯಮ, ಷರತ್ತುಗಳ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿ ಗಿಗ್ ಕಾರ್ವಿುಕ.

ಯಾವ ಸಂದರ್ಭದಲ್ಲಿ ಸೌಲಭ್ಯ ಇಲ್ಲ

  • ಅಪಘಾತದ ವೇಳೆ ಫಲಾನುಭವಿ ಮದ್ಯ ಅಥವಾ ಮಾದಕ ದ್ರವ್ಯ ಸೇವನೆ
  • ಬುದ್ಧಿಭ್ರಮಣೆಯ ಕಾರಣ ಫಲಾನುಭವಿಗೆ ಅಪಘಾತ
  • ಅಪರಾಧ ಉದ್ದೇಶದಿಂದ ಮಾಡಿದ ಯಾವುದಾದರೂ ಕಾನೂನು ಉಲ್ಲಂಘನೆಯಿಂದ ಫಲಾನುಭವಿಗೆ ಅಪಘಾತ
  • ಯುದ್ಧ, ಆಕ್ರಮಣ, ವಿದೇಶಿ ವೈರಿಯ ಕೃತ್ಯ, ದಂಗೆ, ಕ್ರಾಂತಿ, ಮಿಲಿಟರಿ ಅಥವಾ ಅಧಿಕಾರ ಕಿತ್ತುಕೊಳ್ಳುವುದು, ಬಂಧನ ಇತ್ಯಾದಿ ಕಾರಣದಿಂದ ಸಂಭವಿಸಿದ ಅಪಘಾತ
  • ಪರಮಾಣು ಅಥವಾ ಸಾಮಗ್ರಿಗಳ ಕಾರಣ ಸಂಭವಿಸಿದ ಅಪಘಾತ

ಕ್ಲೇಮ್ ವಿಧಾನ

  • ಅರ್ಜಿದಾರ/ ಫಲಾನುಭವಿಯ ಮರಣ/ ಅಪಘಾತ ಸಂಭವಿಸಿದ ಒಂದು ವರ್ಷದೊಳಗೆ ನಿಗದಿತ ಅರ್ಜಿ ನಮೂನೆಯಲ್ಲಿ ಕಾರ್ವಿುಕ ಇಲಾಖೆ ಅಧಿಕಾರಿಗಳ ಕಚೇರಿ ಅಥವಾ ನೇರವಾಗಿ ಮಂಡಳಿಗೆ ಅರ್ಜಿ ಸಲ್ಲಿಸುವುದು
  • ಕ್ಲೇಮ್ ಅರ್ಜಿ ಜತೆಗೆ ಯೋಜನೆಯಡಿ ನೀಡಿದ ಗುರುತಿನ ಚೀಟಿ, ಮರಣ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರ, ನಿಗದಿತ ನಮೂನೆಯಲ್ಲಿ ಉದ್ಯೋಗ ಪ್ರಮಾಣಪತ್ರ, ಕಂದಾಯ ಇಲಾಖೆ ವಂಶವೃಕ್ಷ ಪ್ರಮಾಣಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್ ಪ್ರತಿ, ನಾಮನಿರ್ದೇಶಿತರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ದಾಖಲೆಗಳನ್ನು ಲಗತ್ತಿಸುವುದು
  • ಅಪಘಾತ ಪ್ರಕರಣದಲ್ಲಿ ಈ ದಾಖಲೆಗಳೊಂದಿಗೆ ಮರಣೋತ್ತರ ಪರೀಕ್ಷಾ ವರದಿ, ಪ್ರಥಮ ವರ್ತಮಾನ ವರದಿ, ಆಸ್ಪತ್ರೆಯ ಮೂಲ ಬಿಲ್​ಗಳು, ಡಿಸ್ಚಾರ್ಜ್ ಸಾರಾಂಶ, ವೈದ್ಯಕೀಯ ದುರ್ಬಲತೆ ಪ್ರಮಾಣಪತ್ರ ಅಗತ್ಯವಿರುವ ಇತರ ದಾಖಲೆಗಳನ್ನು ಸಲ್ಲಿಸುವುದು
  • ಎಲ್ಲ ಪರಿಹಾರ ಮೊತ್ತವನ್ನು ಫಲಾನುಭವಿ / ನಾಮನಿರ್ದೇಶಿತರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಮಾಡುವುದು
  • ಫಲಾನುಭವಿಯು ಮರಣ ಸಮಯದಲ್ಲಿ ಅವಿವಾಹಿತನಾಗಿದ್ದರೆ ತಾಯಿ ತಂದೆ ಹಾಗೂ ವಿವಾಹಿತನಾಗಿದ್ದಲ್ಲಿ ಹೆಂಡತಿ ಮತ್ತು ಮಕ್ಕಳು ಕಾನೂನುಬದ್ಧ ವಾರಸುದಾರರು

ಯೋಜನೆಗೆ ಯಾರು ಅರ್ಹರು?

  • ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪ್ಲಾಟ್​ಫಾಮ್ರ್ ಆಧಾರಿತ ಗಿಗ್ ಕಾರ್ವಿುಕರು ಯೋಜನೆಗೆ ಅರ್ಹರು
  • ಅರ್ಜಿದಾರರು 18 ರಿಂದ 60 ವರ್ಷದವರಾಗಿರಬೇಕು
  • ಆದಾಯ ತೆರಿಗೆ ಪಾವತಿದಾರರಾಗಿಬಾರದು
  • ಇಎಸ್​ಐ ಮತ್ತು ಪಿಎಫ್ ಸೌಲಭ್ಯ ಹೊಂದಿರಬಾರದು
  • ಪ್ಲಾಟ್​ಫಾಮ್ರ್ ಆಧಾರಿತ ಗಿಗ್ ಕಾರ್ವಿುಕರು ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್​ನಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ನೋಂದಣಿಗೆ ಬೇಕಾದ ದಾಖಲೆಗಳು

  • ಗಿಗ್ ಕಾರ್ವಿುಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣಪತ್ರ/ ಗುರುತಿನ ಚೀಟಿ
  • ಆಧಾರ್ ಸಂಖ್ಯೆ
  • ಇ-ಶ್ರಮ್ ಗುರುತಿನ ಚೀಟಿ ಸಂಖ್ಯೆ
  • ಪಾಸ್​ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ
  • ವಿಳಾಸ ಪುರಾವೆಗಾಗಿ ಯಾವುದಾದರೂ ದಾಖಲೆ (ಮತದಾರರ ಗುರುತಿನ ಚೀಟಿ/ ಚಾಲನಾ ಪರವಾನಗಿ/ಆಧಾರ್/ ಪಾಸ್​ಪೋರ್ಟ್/ ಬ್ಯಾಂಕ್ ಪಾಸ್ ಬುಕ್ ಇತ್ಯಾದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net