Bihar Election | ಎನ್​​ಡಿಎಗೆ ಮತ್ತೇ ಬಿ'ಹಾರ'..? ಬಿಜೆಪಿಗೆ ಅಧಿಕಾರ ಎಂದ ಎಂಟು ಸಮೀಕ್ಷೆಗಳು

Bihar Election
Published on

ಪಾಟ್ನಾ: ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದ ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಎಕ್ಸಿಟ್​ ಪೋಲ್​ ಫಲಿತಾಂಶಗಳು ಎರಡನೇ ಹಂತದ ಮತದಾನ ಮುಗಿದ ಬಳಿಕ ಮಂಗಳವಾರ ( ನ 11) ಸಂಜೆ ಘೋಷಣೆಯಾಗುತ್ತಿದ್ದು. ಅನೇಕ ಸಮೀಕ್ಷೆಗಳು ಮತ್ತೊಮ್ಮೆ ರಾಜ್ಯದಲ್ಲಿ ಎನ್​ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

ಇತ್ತೀಚೆಗೆ ನಿರ್ಗಮನ ಸಮೀಕ್ಷೆಯ ಭವಿಷ್ಯವಾಣಿಗಳು ಸರಿಯಾಗಿದ್ದಕ್ಕಿಂತ, ತಪ್ಪಾಗಿರುವುದೇ ಹೆಚ್ಚು. ಅದಕ್ಕೆ 2024 ರ ಲೋಕಸಭಾ ಚುನಾವಣೆ, ಹರಿಯಾಣ ವಿಧಾನಸಭಾ ಚುನಾವಣೆ ಸಾಕ್ಷಿ.

2025 ರ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಿತು. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, 2 ನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಈಗ ಬಿಡುಗಡೆಯಾಗಿರುವ ಎಂಟು ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದು. ದೈನಿಕ್ ಭಾಸ್ಕರ್ ಸಮೀಕ್ಷೆಯು ಎನ್‌ಡಿಎ 145 ರಿಂದ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ, ಇತ್ತ ಮ್ಯಾಟ್ರಿಜ್ 147 ರಿಂದ 167 ಸ್ಥಾನಗಳ ಭವಿಷ್ಯ ನುಡಿದಿದೆ.

ಸಮೀಕ್ಷೆಗಳ ಭವಿಷ್ಯವಾಣಿ

ಸಮೀಕ್ಷಾ ಸಂಸ್ಥೆಗಳು     ಎನ್​ಡಿಎ        ಮಹಾಘಟಬಂದನ್​   

  1. ದೈನಿಕ್​ ಭಾಸ್ಕರ್​            145-160             73-91
  2. ಚಾಣಕ್ಯ ಸ್ಟ್ರ್ಯಾಟರ್ಜೀಸ್​   130-138             100-108
  3. ಮ್ಯಾಟ್ರಿಜ್                    147-167              70-90
  4. ಪಿ-ಮಾರ್ಕ್​                  142-162              80-98
  5. ಪೀಪಲ್​ ಇನ್​ಸೈಟ್​      133-148              87-102
  6. ಟಿಐಎಫ್​ ರೀಸರ್ಚ್​​       145-163              76-95 
  7. ಡಿವಿ ರೀಸರ್ಚ್​​             137-152               83-98
  8. ಜೆವಿಸಿ                       135-150               88-103

ಬಿಹಾರದಲ್ಲಿ ಎನ್‌ಡಿಎ, ಮಹಾಘಟಬಂಧನ್ ಮತ್ತು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ, ಪ್ರಚಾರವು ತೀವ್ರ ತುರುಸಿನಿಂದ ಕೂಡಿತ್ತು. ಎನ್‌ಡಿಎ ತನ್ನ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಎದುರಿಸಿ, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ, ಆರ್‌ಜೆಡಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಂಗಲ್ ರಾಜ್ ಆಡಳಿತ ನಡೆಯಲಿದೆ ಎಂದು ಎಚ್ಚರಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net