ಹಸೆ ಚಿತ್ತಾರಕ್ಕೆ ಜಿಐ ಟ್ಯಾಗ್ ಶೀಘ್ರ

ಹಸೆ ಚಿತ್ತಾರ ಕಲಾವಿದರ ಅನುಪಾಲನಾ ಸಭೆ
Review Meeting for 'Hase Chittara' Artists
ಸಾಗರದಲ್ಲಿ ಆಯೋಜಿಸಿದ್ದ ಹಸೆ ಚಿತ್ತಾರ ಕಲಾವಿದರ ಅನುಪಾಲನ ಸಭೆಯಲ್ಲಿ ಬೆಂಗಳೂರಿನ ಸಂಗೀತ ಮುರಳಿ ಹಸೆ ಚಿತ್ತಾರವನ್ನು ಅನಾವರಣಗೊಳಿಸಿದರು. ಗಣೇಶ್, ಸುರೇಶ್, ಮೌನೇಶ್ ಬಡಿಗೇರ ಇತರರಿದ್ದರು.
Published on: 

ಸಾಗರ: ಮಲೆನಾಡಿನ ಪ್ರಾತಿನಿಧಿಕ ಕಲೆ ಹಸೆ ಚಿತ್ತಾರಕ್ಕೆ ಶೀಘ್ರವೇ ಕೇಂದ್ರ ಸರ್ಕಾರದಿಂದ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್)ಮಾನ್ಯತೆ ದೊರಕಲಿದೆ ಎಂದು ಬೆಂಗಳೂರಿನ ಸೆಂಟರ್ ಫಾರ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಸಂಸ್ಥೆ ಅಧಿಕಾರಿ ಸಂಗೀತ ಮುರಳಿ ಹೇಳಿದರು.

ನಗರದ ಸಾಮರ್ಥ್ಯ ಸೌಧದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಆಯೋಜಿಸಿದ್ದ ಶಿವಮೊಗ್ಗ ಮತ್ತು ಕಾರವಾರ ಜಿಲ್ಲೆಯ ಹಸೆ ಚಿತ್ತಾರ ಕಲಾವಿದರ ಅನುಪಾಲನಾ ಸಭೆಯಲ್ಲಿ ಮಾತನಾಡಿದರು.

ಈಗಾಗಲೆ ಎರಡು ಜಿಲ್ಲೆಗಳ ಕಲಾವಿದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಾಂಪ್ರದಾಯಿಕ ಕಲೆಯನ್ನು ಮುನ್ನಡೆಸಿಕೊಂಡು ಬರೆಯತ್ತಿರುವವರ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಹಸೆ ಚಿತ್ತಾರಕ್ಕೆ ಜಿಐ ಟ್ಯಾಗ್ ದೊರೆತಲ್ಲಿ ಕಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಳ್ಳಲಿದೆ. ಕಲಾವಿದರ ಜತೆ ಮಾತುಕತೆ ನಡೆಸಿ ಇನ್ನಷ್ಟು ಅಗತ್ಯ ವಿವರ ಪಡೆದುಕೊಂಡಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಮಾತನಾಡಿ, ಶಿವಮೊಗ್ಗ ಮತ್ತು ಕಾರವಾರ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚಿತ್ತಾರದ ಸಂಪ್ರದಾಯಿಕ ಕಲಾವಿದರಿದ್ದಾರೆ. ಅಂತಹ ಕೌಶಲ ಇರುವ ಕಲಾವಿದರು ಹಾಗೂ ಕಲೆಗೆ ಮಾನ್ಯತೆಯಿಂದ ಬೇಡಿಕೆಯು ಹೆಚ್ಚುತ್ತದೆ. ಮಲೆನಾಡಿನ ಅಪ್ಪೆಮಿಡಿಗೆ ಈಗಾಗಲೆ ಭೌಗೋಳಿಕ ಸೂಚ್ಯಂಕ ಮಾನ್ಯತೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನಸೆಳೆದಿದೆ. ಈ ಬೇಡಿಕೆ ಹಸೆ ಚಿತ್ತಾರಕ್ಕೂ ಬರಲಿದೆ ಎಂದು ಹೇಳಿದರು.

ಮಲೆನಾಡು ಹಸೆ ಚಿತ್ತಾರ ಕಲಾವಿದರ ಸಂಘದ ರವಿರಾಜ್ ಮಾತನಾಡಿ, ಹಸೆ ಚಿತ್ತಾರಕ್ಕೆ ಮಾನ್ಯತೆ ಪಡೆಯುವ ಉದ್ದೇಶದಿಂದ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಇತ್ತಿಚೆಗೆ ಚೆನ್ನೈನಲ್ಲಿ ಈ ಬಗ್ಗೆ ಪರೀಕ್ಷೆ ಬರೆದು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಎಚ್.ಸುರೇಶ್, ಸಾಗರ ತಾಪಂ ಇಒ ಮೌನೇಶ್ ಬಡಿಗೇರ, ಹಸೆ ಕಲಾವಿದರಾದ ಭಾಗೀರಥಿ, ಕಾತ್ಯಾಯಿನಿ, ಫಣಿಯಮ್ಮ, ಗೌರಮ್ಮ, ಉಷಾ, ವೆಂಕಟೇಶ್, ಶ್ವೇತಾ, ಅಶ್ವಿನಿ ಇತರರಿದ್ದರು.