ಮತ್ತೊಮ್ಮೆ ಗ್ಯಾಂಗ್​ಸ್ಟರ್​ ಆದ ಶಿವಣ್ಣ; 'ಘೋಸ್ಟ್‌' ಚಿತ್ರದ ಮೋಷನ್​ ಪೋಸ್ಟರ್​ ಬಿಡಗುಡೆ

Ghost - Final
Published on

ಬೆಂಗಳೂರು: ಶಿವರಾಜಕುಮಾರ್​ ಅಭಿನಯದ 'ಘೋಸ್ಟ್​' ಚಿತ್ರದ ಚಿತ್ರೀಕರಣ ಕೆಲವು ತಿಂಗಳ ಹಿಂದೆಯೇ ಪ್ರಾರಂಭವಾಗಿತ್ತು. ಆದರೆ, ಚಿತ್ರದಲ್ಲಿ ಅವರ ಪಾತ್ರವೇನು ಎಂಬ ರಹಸ್ಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಈಗ ಹೊಸ ವರ್ಷದ ಪ್ರಯುಕ್ತ, 'ಘೋಸ್ಟ್​' ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಶಿವಣ್ಣ ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿದೆ ಚಿತ್ರತಂಡ.

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿ, ಶ್ರೀನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಘೋಸ್ಟ್' ಚಿತ್ರದ ಮೋಷನ್​ ಪೋಸ್ಟರ್​, ಹೊಸ ವರ್ಷದ ಮೊದಲ ದಿನ ಬಿಡುಗಡೆಯಾಗುತ್ತಿದೆ. 'Once a Gangster, always a Gangster' ಎಂಬ ಉಪಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ಪೋಸ್ಟರ್​ ಯೂಟ್ಯೂಬ್​ನ ಸಂದೇಶ್​ ಪ್ರೊಡಕ್ಷನ್ಸ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

'ಘೋಸ್ಟ್' ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ 14 ಸೆಟ್​ಗಳನ್ನು ನಿರ್ಮಿಸಿ ಅಲ್ಲಿ ಪ್ರಮುಖ ಭಾಗದ ಚಿತ್ರೀಕರಣ ಮಾಡಲಾಗಿತ್ತು. ಮೈಸೂರಿನಲ್ಲೂ ಐದು ಸೆಟ್​ಗಳನ್ನು ನಿರ್ಮಿಸಿ ಅಲ್ಲೂ ಒಂದಿಷ್ಟು ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿಯಲ್ಲಿ ಮೂರನೆಯ ಹಂತದ ಚಿತ್ರೀಕರಣ ನಡೆಯಲಿದ್ದು, ಈ ಹಂತದಲ್ಲಿ ಬಾಕಿ ಉಳಿದಿರುವ ಚಿತ್ರೀಕರಣವನ್ನು ಮುಗಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

'ಘೋಸ್ಟ್​' ಚಿತ್ರವು ಕೆಲವೇ ಪಾತ್ರಗಳ ಸುತ್ತ ಸುತ್ತಲಿದ್ದು, ಶಿವರಾಜಕುಮಾರ್, ಮಲಯಾಳಂ ನಟ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಶ್ರೀನಿ ಕಥೆ-ಚಿತ್ರಕಥೆ ಬರೆದರೆ, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net