

ಗಾಜಿಯಾಬಾದ್: ಲೋನಿಯ ಪ್ರೇಮ್ ನಗರ ಕಾಲೋನಿಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಹಾಲು ಕುಡಿಯಲು ನೀಡಲಾಯಿತು. ಆದರೆ ಹಾಲು ಕುಡಿದ ನಂತರ ಒಬ್ಬರಾದ ನಂತರ ಒಬ್ಬರಂತೆ ಮಕ್ಕಳ ಆರೋಗ್ಯ ಹದಗೆಡತೊಡಗಿತು. ಮಕ್ಕಳಲ್ಲಿ ಹೊಟ್ಟೆನೋವು, ತಲೆಸುತ್ತು ಮತ್ತು ವಾಂತಿ ಕಾಣಿಸಿಕೊಂಡ ತಕ್ಷಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಮಾಹಿತಿ ಪ್ರಕಾರ, ಸುಮಾರು 20 ಮಕ್ಕಳನ್ನು ಲೋನಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಹದಗೆಟ್ಟಿದೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸುದ್ದಿಯಿಂದ ಶಿಕ್ಷಣ ಇಲಾಖೆಯಲ್ಲಿ ಸಂಚಲನ ಮೂಡಿದೆ.
ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 9 ಮಕ್ಕಳ ಸ್ಥಿತಿ ಸಹಜವಾದ ಬಳಿಕ ಮನೆಗೆ ಕಳುಹಿಸಲಾಗಿದೆ. ಮಕ್ಕಳನ್ನು ದಾಖಲಿಸಿಕೊಳ್ಳಲು ಗಾಜಿಯಾಬಾದ್‌ನಿಂದ ಲೋನಿಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕಾಯಿತು. ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಹಾಲಿನ ಮಾದರಿಯನ್ನು ತೆಗೆದುಕೊಳ್ಳಲಾಗಿದೆ.
ಈ ಹಿಂದೆಯೂ ಸಹ ಸ್ಥಳೀಯರು ಮಧ್ಯಾಹ್ನದ ಊಟದ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಾದ ನಂತರವೂ ಮಧ್ಯಾಹ್ನದ ಊಟ ಸುಧಾರಿಸಿಲ್ಲ. ಆಹಾರ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ ಮಾದರಿಗಳನ್ನು ಸಂಗ್ರಹಿಸುತ್ತಿದೆ.
ಸದ್ಯ ಪೋಷಕರು ಶಾಲೆಯ ಹೊರಗೆ ಗಲಾಟೆ ಮಾಡುತ್ತಿದ್ದಾರೆ. ಮಕ್ಕಳಿಗೆ ಕಳಪೆ ಗುಣಮಟ್ಟದ ಹಾಲನ್ನು ಶಿಕ್ಷಕರೇ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸರು ಸ್ಥಳದಲ್ಲೇ ಇದ್ದಾರೆ. ಮುಖ್ಯ ವೈದ್ಯಾಧಿಕಾರಿ ಭಾವತೋಷ್ ಶಂಖಧರ್ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಹಾಲಿನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸುವಂತೆ ಸಿಎಂಒ ತಿಳಿಸಿದೆ.