ದಾಖಲೆಗಳನ್ನು ಪಡೆದು ಮನೆ ಬಾಡಿಗೆ ಕೊಡಿ

gajanana vamana sutar
ಗಜಾನನ ವಾಮನ ಸುತಾರ್
Published on

ತೀರ್ಥಹಳ್ಳಿ: ಹೊರ ರಾಜ್ಯಗಳಿಂದ ಬಂದಿರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸಾರ್ವಜನಿಕರು ತೀವ್ರ ನಿಗಾ ವಹಿಸಬೇಕು. ಅಂತಹ ವ್ಯಕ್ತಿಗಳ ಪೂರ್ವಾಪರ ತಿಳಿಯದೆ ಮನೆ ಬಾಡಿಗೆ ಅಥವಾ ಲೀಸ್‌ಗೆ ಕೊಡಬಾರದು ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ್ ಹೇಳಿದರು.

ಇತ್ತೀಚೆಗೆ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು, ಸಾಕಷ್ಟು ಮಂದಿ ಬೇರೆ ಬೇರೆ ಕೆಲಸಗಳ ಮೇಲೆ ತಾಲೂಕಿನಾದ್ಯಂತ ನೆಲೆಸಿದ್ದಾರೆ. ಇಂಥವರಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಗುರುತಿನ ಚೀಟಿ ಮತ್ತಿತರ ಅಗತ್ಯ ದಾಖಲೆಗಳನ್ನು ತೆಗೆದುಕೊಳ್ಳಬೇಕು. ಅನುಮಾನ ಬಂದಲ್ಲಿ ಪೊಲೀಸ್ ಇಲಾಖೆ ನೆರವು ಪಡೆಯಬಹುದು. ಅಂತಹ ವ್ಯಕ್ತಿಗಳಿಂದ ಅಪರಾಧಗಳು ನಡೆದರೆ ಸಂಬಂಧಿಸಿದ ಗುತ್ತಿಗೆದಾರರು, ಮನೆ ಮಾಲೀಕರನ್ನೇ ಹೊಣೆ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಶಾಲಾ ಕಾಲೇಜು ಆರಂಭವಾಗಿವೆ. ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳು ನಿಯಮ ಉಲ್ಲಂಘಿಸಿ ಮಿತಿ ಮೀರಿದ ಸಂಖ್ಯೆಯಲ್ಲಿ ಕರೆದೊಯ್ಯತ್ತಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿಗಳು ಎಚ್ಚೆತ್ತುಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಕ್ರೀದ್ ಹಬ್ಬವನ್ನು ಅತ್ಯಂತ ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೋಮು ಪ್ರಚೋದನೆ ಮಾಡುವ ಹಾಗೂ ನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂಟರ್‌ನೆಟ್ ದುರ್ಬಳಕೆಯಾಗುತ್ತಿದೆ. ಡಿಜಿಟಲ್ ಇನ್ವೆಸ್ಟ್‌ಮೆಂಟ್, ಆನ್‌ಲೈನ್ ಮಾರ್ಕೆಟಿಂಗ್‌ನಲ್ಲಿ ಹಣ ಕಳೆದುಕೊಳ್ಳುವ ಆತಂಕವಿದೆ. ಸೈಬರ್ ಸೆಕ್ಯೂರಿಟಿ ಬಗ್ಗೆ ಎಚ್ಚರಿಕೆ ಅಗತ್ಯ. ಯಾವ ಕಾರಣಕ್ಕೂ ಪಾಸ್‌ವರ್ಡ್ ಮಾಹಿತಿ ಹಂಚಿಕೊಳ್ಳಬಾರದು. ಇತ್ತೀಚೆಗೆ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು, ಯುವಕರು ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು. ಈಚೆಗೆ ಕೋಣಂದೂರು ಸಮೀಪ ಮನೆ ಸಮೀಪದಲ್ಲೇ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ತಾಲೂಕಿನಲ್ಲಿ ಈವರೆಗೆ 21 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಯಾವುದೇ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿ ನೀಡುವವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net