ಮೌಢ್ಯ ತೊಲಗಿ ಸಮಾನತೆ ನೆಲಸಲಿ: ಮಂಜಮ್ಮ ಜೋಗತಿ

manjamma
ಪ್ರಜಾ ಜಾಗೃತಿ ವೇದಿಕೆಯನ್ನು ಮಂಜಮ್ಮ ಜೋಗತಿ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಡಿ.ಎಸ್.ಅರುಣ್, ನರಸಿಂಹ ಗಂಧದ ಮನೆ, ಕೆ.ಬಿ.ಪ್ರಸನ್ನಕುಮಾರ್, ದಿವ್ಯಾ ಪ್ರವೀಣ್, ಡಿ.ಶ್ಯಾಮ್ ಇತರರಿದ್ದರು.
Published on

ಶಿವಮೊಗ್ಗ: ಎಲ್ಲರಿಗೂ ಸಮಾನವಾಗಿ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದ್ದರೂ ತೃತೀಯ ಲಿಂಗಿಗಳನ್ನು ಕಡೆಗಣಿಸಲಾಗುತ್ತಿದೆ. ಅವರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ದೊರಕಿಸುವ ಪ್ರಯತ್ನ ನಡೆಯಬೇಕೆಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಪ್ರಜಾ ಜಾಗೃತಿ ವೇದಿಕೆ ಹೆಸರಿನ ನೂತನ ಸಂಘಟನೆಗೆ ಚಾಲನೆ ನೀಡಿ ಮಾತನಾಡಿ, ನೂತನ ಸಂಘಟನೆ ಸಮಾನತೆಯ ವೇದಿಕೆಯಾಗಲಿ. ಕನ್ನಡ ಉಳಿಸುವ ಕೆಲಸ ಮಾಡುವಂತಾಗಲಿ. ನನ್ನಂತವರು ಜನ್ಮತಾಳಿದರೆ ಅವರನ್ನು ಅವಮಾನಿಸದೇ ಉತ್ತಮ ಪ್ರಜೆಯನ್ನಾಗಿ ರೂಪಿಸಿ ಎಂದರು.
ಸಂಘ ಸಂಸ್ಥೆ ಒಬ್ಬರಿಂದ ನಡೆಯುವುದಿಲ್ಲ. ಚಪ್ಪಾಳೆ ಹೊಡೆಯಲು ಎರಡು ಕೈಗಳು ಬೇಕು. ಒಂಟಿತನದಲ್ಲಿ ಯಾವಾಗಲೂ ಬಲ ಇರುವುದಿಲ್ಲ. ಒಗ್ಗಟ್ಟಿನಲ್ಲಿ ಬಲವಿರುತ್ತದೆ. ಈ ಸಂಘಟನೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿ. ಮೌಢ್ಯವನ್ನು ದೂರಾಗಿಸಲಿ. ಸಂಘಟನೆಯಲ್ಲಿ ಎಲ್ಲರೂ ಸಮಾನರು ಎಂಬ ಮನೋಭಾವವಿರಲಿ ಎಂದು ಸಲಹೆ ನೀಡಿದರು.
ಟೀಕಿಸುವವರು ಎಲ್ಲ ಕಾಲದಲ್ಲೂ, ಎಲ್ಲ ಕಡೆಗಳಲ್ಲೂ ಇರುತ್ತಾರೆ. ಅದಕ್ಕೆ ಚಿಂತಿಸುವ ಅವಶ್ಯಕತೆಯಿಲ್ಲ. ಪರಸ್ಪರರಲ್ಲಿ ವೈಮನಸ್ಸು ಬೇಡ. ಎಲ್ಲರ ಆತ್ಮದಲ್ಲೂ ಪರಮಾತ್ಮನಿದ್ದಾನೆ. ಒಬ್ಬ ಇನ್ನೊಬ್ಬನನ್ನು ಗೌರವಿಸಿದಾಗ ಮಾತ್ರ ದೇವರ ಆಶೀರ್ವಾದ ಸಿಗುತ್ತದೆ ಎಂದರು.
ಶಾಸಕರಾದ ಶಾರದಾ ಪೂರ‌್ಯಾನಾಯ್ಕಾ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಜಾ ಜಾಗೃತಿ ವೇದಿಕೆಯ ಅಧ್ಯಕ್ಷ ನರಸಿಂಹ ಗಂಧದ ಮನೆ, ಉಪಾಧ್ಯಕ್ಷ ಡಿ.ಶ್ಯಾಮ್, ಪ್ರಮುಖರಾದ ಕವಿತಾ ಸಾಗರ್, ದಿವ್ಯಾ ಪ್ರವೀಣ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net