ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ

27blrp1
ಶ್ರಿ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಎಂ.ಮಮತಾ, ರೇವಣ್ಣ, ಉಷಾ, ಸುಜಯ್, ರಾಜೇಗೌಡ ಇತರರಿದ್ದರು.
Published on

ಬೇಲೂರು: ಏ.2 ರಿಂದ 15ರ ತನಕ ನಡೆಯುವ ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾದ್ಯವಾಗಲಿಲ್ಲ. ಆದರೆ ಈ ಬಾರಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಸಿದ್ಧತೆ ಕೈಗೊಳ್ಳಲು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚೆರ್ಚಿಸಲಾಗಿದ್ದು, ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ವಿಶೇಷವಾಗಿ ಪೊಲೀಸ್ ಭದ್ರತೆ, ಪುರಸಭೆಯಿಂದ ಕುಡಿಯುವ ನೀರು, ಸ್ವಚ್ಛತೆ, ಕಲ್ಯಾಣಿ ಸ್ವಚ್ಛತೆ, ಭಕ್ತರಿಗೆ ಸಾರಿಗೆ ಬಸ್ ಸೌಲಭ್ಯ, ಪಟ್ಟಣದ ಮುಖ್ಯರಸ್ತೆ, ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ, ಬಂದವರಿಗೆ ದಾಸೋಹದ ವ್ಯವಸ್ಥೆ, ಹೂವಿನ ಅಲಂಕಾರ ಸೇರಿದಂತೆ ಅವರವರ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ದೇಗುಲದ ಅಡ್ಡೆಗಾರರು ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಹಾಸನಾಂಬಾ ದೇವಿ ಜಾತ್ರಾ ಮಹೋತ್ಸವದ ರೀತಿಯಲ್ಲೇ ಬೇಲೂರು ಪಟ್ಟಣವನ್ನು ಸಿಂಗರಿಸಬೇಕು. ಪ್ರಮುಖ ರಸ್ತೆ ಮಾರ್ಗದಲ್ಲಿ ಸ್ವಾಗತ ಕಮಾನು ಅಳವಡಿಸಬೇಕು. ಹೆಚ್ಚಿನ ಪ್ರಚಾರ ನೀಡುವ ಮೂಲಕ ಜ್ರಾತ್ರೆಯ ಸೊಬಗನ್ನು ಇಮ್ಮಡಿಗೊಳಿಸಬೇಕು. ಹದಿನೈದು ದಿನ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವಿಜೃಂಭಣೆಯಿಂದ ನಡೆಸಬೇಕು ಎಂದರು.

ದೇಗುಲದ ಆಡಳಿತಾಧಿಕಾರಿ ಕೆ.ಟಿ.ಶಾಂತಲಾ ಮಾತನಾಡಿ, ದೇವರ ಜಾತ್ರಾ ಮಹೋತ್ಸವಕ್ಕೆ ದಾನಿಗಳು ಸಹ ಸಹಕಾರ ಮಾಡಲಿದ್ದು, ದೇಗುಲದ ಸಂಪ್ರದಾಯಕ್ಕೆ ಧಕ್ಕೆ ಉಂಟಾಗದಂತೆ ಈ ಬಾರಿ ಮಹೋತ್ಸವಕ್ಕೆ ಹೆಚ್ಚಿನ ಮೆರುಗು ನೀಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ತಹಸೀಲ್ದಾರ್ ಎಂ.ಮಮತಾ, ಪಿಐ ರೇವಣ್ಣ, ಪುರಸಭೆ ಉಪಾಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಸುಜಯ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಆಡಳಿತ ವೈದ್ಯಾಧಿಕಾರಿ ಡಾ.ಸುಧಾ, ಸೆಸ್ಕ್ ಎಇಇ ಬಸವರಾಜ್, ದೇಗುಲ ಇಒ ಯೋಗೀಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net