ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ

21-anr-3
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಆಯನೂರಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಡಾ. ಧನಂಜಯ ಸರ್ಜಿ, ಎಸ್.ದತ್ತಾತ್ರಿ, ಕೆ.ಬಿ.ಅಶೋಕನಾಯ್ಕ, ವಿರೂಪಾಕ್ಷಪ್ಪ, ನಾಗರಾಜ್ ಇತರರಿದ್ದರು.
Published on

ಆಯನೂರು: ಪ್ರತಿ ಕಾರ್ಯಕರ್ತನೂ ಸ್ವಚ್ಛತಾ ಆಂದೋಲನಕ್ಕೆ ಪ್ರತಿ ವರ್ಷ ನೂರು ತಾಸು ಮೀಸಲಿಡಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಆಯನೂರಿನ ವಿನಾಯಕ ವೃತ್ತದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನದಿಂದ ತುರ್ತು ರಕ್ತದ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ದೇಶದ ಸ್ವಚ್ಛತೆ, ರಕ್ತದಾನ ಶಿಬಿರ, ತಾಯಿ ಹೆಸರಲ್ಲಿ ಒಂದು ಮರ, ಆರೋಗ್ಯ ತಪಾಸಣೆ ಹೀಗೆ ಪ್ರತಿ ವರ್ಷ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆ ಮಾಡುವುದರಿಂದ ಜನತೆಗೂ ಅನುಕೂಲವಾಗಲಿದೆ ಎಂದರು.

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಒಮ್ಮೆ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯವಿದೆ. ಹೃದಯಾಘಾತ ಪ್ರಮಾಣ ಕಡಿಮೆ ಆಗುತ್ತದೆ. 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಜನರು ರಕ್ತದಾನ ಮಾಡಬಹುದು. ನೀರು ಚೆನ್ನಾಗಿ ಕುಡಿಯಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಬಿ.ಅಶೋಕನಾಯ್ ಮಾತನಾಡಿ, ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದರು. ರಕ್ತದಾನ ಮಾಡಿದ ಜನರಿಗೆ ಪ್ರಮಾಣಪತ್ರ ನೀಡಲಾಯಿತು. ಪ್ರಮುಖರಾದ ಎಸ್.ದತ್ತಾತ್ರಿ, ವಿರೂಪಾಕ್ಷಪ್ಪ, ನಾಗರಾಜ್, ರತ್ನಾಕರ ಶೆಣೈ, ಶಕ್ತಿಕೇಂದ್ರಗಳ ಅಧ್ಯಕ್ಷರು, ಯುವ ಮೋರ್ಚಾ, ಮಹಿಳಾ ಮೊರ್ಚಾ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net