ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ರಂದು 2 ಹಂತದಲ್ಲಿ ಮತದಾನ

Laka samara Karnataka
Published on

ಬೆಂಗಳೂರು: ಇಂದು (ಮಾರ್ಚ್​ 16) ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು, ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ.

ಮೊದಲ ಹಂತ ಏಪ್ರಿಲ್ 26 ಮತ್ತು ಎರಡನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ. ಜೂನ್​ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಮಧ್ಯಾಹ್ನ 3 ಗಂಟೆಗೆ ರಾಷ್ಟ್ರ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್​ ಕುಮಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಯಿತು.

ಕರ್ನಾಟಕದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್​ನಿಂದ 7 ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಣೆ ಮಾಡಿದ್ದರೆ, 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್​ಗೆ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟು ಕೊಟ್ಟಿದೆ ಎಂಬ ಮಾಹಿತಿ ಇದೆ.

ಕರ್ನಾಟಕದ 20 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ

* ಚಿಕ್ಕೋಡಿ: ಅಣ್ಣಾ ಸಾಹೇಬ್​ ಶಂಕರ್​ ಜೊಲ್ಲೆ

* ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್

* ಬಿಜಾಪುರ (ಎಸ್​ಸಿ): ರಮೇಶ್​ ಜಿಗಜಿಣಗಿ

* ಕಲಬುರಗಿ (ಎಸ್​ಸಿ): ಡಾ. ಉಮೇಶ್​ ಜಾಧವ್​

* ಬೀದರ್​: ಭಗವಂತ್ ಖೂಬಾ

* ಕೊಪ್ಪಳ: ಡಾ. ಬಸವರಾಜ್​ ಕ್ಯಾವತೋರ್

* ಬಳ್ಳಾರಿ: ಬಿ. ಶ್ರೀರಾಮುಲು

* ಹಾವೇರಿ: ಬಸವರಾಜ ಬೊಮ್ಮಾಯಿ

* ಧಾರವಾಡ: ಪ್ರಲ್ಹಾದ್​ ಜೋಶಿ

* ದಾವಣಗೆರೆ: ಗಾಯತ್ರಿ ಸಿದ್ದೇಶ್ವರ

* ಶಿವಮೊಗ್ಗ: ಬಿ.ವೈ. ರಾಘವೇಂದ್ರ

* ಉಡುಪಿ-ಚಿಕ್ಕಮಗಳೂರು: ಕೋಟಾ ಶ್ರೀನಿವಾಸ ಪೂಜಾರಿ

* ದಕ್ಷಿಣ ಕನ್ನಡ: ಕ್ಯಾಪ್ಟನ್​ ಬ್ರಿಜೇಶ್​ ಚೌಟಾ

* ತುಮಕೂರು: ವಿ. ಸೋಮಣ್ಣ

* ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​

* ಚಾಮರಾಜನಗರ: ಬಿ. ಬಾಲರಾಜ್

* ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್. ಮಂಜುನಾಥ್

* ಬೆಂಗಳೂರು ಕೇಂದ್ರ: ಪಿ.ಸಿ. ಮೋಹನ್

* ಬೆಂಗಳೂರು ಉತ್ತರ: ಕುಮಾರಿ ಶೋಭಾ ಕರಂದ್ಲಾಜೆ

* ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

ಕಾಂಗ್ರೆಸ್​ ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಹಾ ಶಿವರಾತ್ರಿ ಶುಭದಿನದಂದು ಬಿಡುಗಡೆ ಮಾಡಿತು. ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.

ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ:

* ವಿಜಯಪುರ: ಎಚ್​.ಆರ್.ಅಲಗೂರು

* ಶಿವಮೊಗ್ಗ: ಗೀತಾ ಶಿವರಾಜ್​ಕುಮಾರ್​

* ಹಾಸನ: ಶ್ರೇಯಸ್​ ಪಾಟೀಲ್

* ತುಮಕೂರು: ಎಸ್​ಪಿ ಮುದ್ದಹನುಮೇಗೌಡ

* ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್

* ಹಾವೇರಿ: ಆನಂದ್​ಸ್ವಾಮಿ ಗಡ್ಡ ದೇವರಮಠ

* ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)

ಬಿಜೆಪಿಗೆ ಬಂಡಾಯದ ಬಿಸಿ

ಟಿಕೆಟ್​ ಘೋಷಣೆ ಬೆನ್ನಲ್ಲೇ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ತಮ್ಮ ಪುತ್ರಿನಿಗೆ ಟಿಕೆಟ್​ ಮಿಸ್​ ಆಗಿದ್ದಕ್ಕೆ ಆಕ್ರೋಶಗೊಂಡಿರುವ ಈಶ್ವರಪ್ಪ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದರಲ್ಲೂ ಶಿವಮೊಗ್ಗದಿಂದ ಹಾಲಿ ಸಂಸದ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧವೇ ಅಖಾಡಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣಾ ಅಖಾಡ ಬಹಳ ರಂಗೇರಿದೆ. ​

ಕಳೆದ ಬಾರಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿತ್ತು. ಆದರೆ, ರಾಜ್ಯದ ಜನರು ಮೈತ್ರಿಯ ಕೈಹಿಡಿಯಲಿಲ್ಲ. ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್​ ಹಾಗೂ ಜೆಡಿಎಸ್ ತಲಾ​ 1 ಸ್ಥಾನಗಳೊಂದಿಗೆ ತೀವ್ರ ಹಿನ್ನಡೆಯನ್ನು ಅನುಭವಿಸಿತು. ಸಂಸದೆ ಸುಮಲತಾ ಅಂಬರೀಷ್​ ಪಕ್ಷೇತರರಾಗಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಜಯಭೇರಿ ಬಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net