ಮತದಾನದ ಹಬ್ಬಕ್ಕೆ ಕ್ಷಣಗಣನೆ: ಮತಗಟ್ಟೆಯತ್ತ ತೆರಳಿದ ಸಿಬ್ಬಂದಿ

Election)
Published on

ಮಂಡ್ಯ: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತದಾನದ ಪ್ರಕ್ರಿಯೆ ಶಾಂತಿ ಮತ್ತು ಸುವ್ಯವಸ್ಥೆ ಜತೆಗೆ ಪಾರದರ್ಶಕ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಂಗಳವಾರ ಬೆಳಗ್ಗೆ ಆಯಾಯ ತಾಲೂಕು ಕೇಂದ್ರದಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಮುಗಿಸಿದ ಸಿಬ್ಬಂದಿ ಮತಯಂತ್ರದೊಂದಿಗೆ ಮತಗಟ್ಟೆಗೆ ತೆರಳಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಎಡಿಸಿ ಡಾ.ಎಚ್.ಎಲ್.ನಾಗರಾಜು ಪರಿಶೀಲನೆ ನಡೆಸಿದರು. ಇನ್ನು ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ 89 ಅಭ್ಯರ್ಥಿಗಳ ಹಣೆಬರಹ ಬರೆಯಲು ಸಜ್ಜಾಗಿದ್ದಾರೆ.

1798 ಮತಗಟ್ಟೆ ಸ್ಥಾಪನೆ: ಜಿಲ್ಲೆಯಲ್ಲಿ 1798 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಳವಳ್ಳಿ 268, ಮದ್ದೂರು 254, ಮೇಲುಕೋಟೆ 258, ಮಂಡ್ಯ 254, ಶ್ರೀರಂಗಪಟ್ಟಣ 249, ನಾಗಮಂಗಲ 257, ಕೆ.ಆರ್.ಪೇಟೆ ತಾಲೂಕಿನಲ್ಲಿ 258 ಮತಗಟ್ಟೆ ತೆರೆಯಲಾಗಿದೆ. 1798ರ ಪೈಕಿ 24 ಸೂಕ್ಷ್ಮ, 319 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಇನ್ನು ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸುವ 14 ಪಿಂಕ್ ಮತಗಟ್ಟೆ, ಅಂಗವಿಕಲ ಅಧಿಕಾರಿಗಳಿರುವ 7, ಯುವ ಅಧಿಕಾರಿಗಳಿರುವ 14 ಹಾಗೂ 35 ಸಾಂಸ್ಕೃತಿಕ ಮತಗಟ್ಟೆಗಳಿವೆ. ಈ ಎಲ್ಲ ಮತಗಟ್ಟೆಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆಂದು ಜಿಲ್ಲೆಯಲ್ಲಿ 7888 ನೌಕರರನ್ನು ಬಳಸಿಕೊಳ್ಳಲಾಗಿದೆ. ಮಳವಳ್ಳಿ ತಾಲೂಕಲ್ಲಿ 1,176, ಮದ್ದೂರಿನಲ್ಲಿ 1,112, ಮೇಲುಕೋಟೆ 1,132, ಮಂಡ್ಯದಲ್ಲಿ 1,112, ಶ್ರೀರಂಗಪಟ್ಟಣದಲ್ಲಿ 1,092, ನಾಗಮಂಗಲದಲ್ಲಿ 1,128 ಮತ್ತು ಕೆ.ಆರ್.ಪೇಟೆ ತಾಲೂಕಿನಲ್ಲಿ 1,136 ನೌಕರರು ನಿಯೋಜನೆಗೊಂಡಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗೆ 319, ಸೂಕ್ಷ್ಮ ಮತಗಟ್ಟೆಗೆ 1,479 ಹಾಗೂ 127 ಸೆಕ್ಟರ್ ಸಿಬ್ಬಂದಿ ಇರಲಿದ್ದಾರೆ. ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 9 ಜನ ಡಿವೈಎಸ್ಪಿ, 29 ಸಿಪಿಐ/ಪಿಐ/ಆರ್‌ಪಿಐ, 58 ಪಿಎಸ್‌ಐ, 137 ಎಎಸ್‌ಐ/ಎಆರ್‌ಎಸ್‌ಐ, 418 ಎಚ್‌ಸಿ/ಎಎಚ್‌ಸಿ, 1,043 ಪಿಸಿ/ಎಪಿಸಿ, 890 ಎಚ್‌ಜಿ, 353 ಸಿಎಪಿಎಫ್/ಐಟಿಬಿಪಿ/ಎಸ್‌ಎಪಿ ಹಾಗೂ 7 ಕೆಎಸ್‌ಆರ್‌ಪಿ ತುಕಡಿ ಕರ್ತವ್ಯ ನಿರ್ವಹಿಸುತ್ತಿದೆ.

ಮತದಾನ ಮುಕ್ತಾಯಗೊಂಡ ಬಳಿಕ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಿಸೈಡಿಂಗ್ ಅಧಿಕಾರಿಗಳಿಂದ ಸಂಗ್ರಹಿಸಲಾಗುತ್ತದೆ. ಬಳಿಕ ಜಿಪಿಎಸ್ ಅಳವಡಿಸಿರುವ ವಾಹನ ಹಾಗೂ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಜಿಲ್ಲಾ ಭದ್ರತಾ ಕೊಠಡಿಯಾದ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಸಾಗಿಸಲಾಗುವುದು. ಅಂತೆಯೇ ಜಿಲ್ಲಾ ಭದ್ರತಾ ಕೊಠಡಿ ಕೇಂದ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ತಲಾ 2 ಭದ್ರತಾ ಕೊಠಡಿ ಗುರುತಿಸಲಾಗಿದೆ. ಮತದಾನದಲ್ಲಿ ಬಳಸಿದ ಇವಿಎಂ ಯಂತ್ರಗಳನ್ನು ಸಂಗ್ರಹಿಸಿ ಮೊಹರು ಮಾಡಿ ಆರಕ್ಷಕರ ಸುಪರ್ದಿಗೆ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net