

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ರಾಜ್ಯಪಾಲ ಕಲ್ರಾಜ್ ಮಿಶ್ರಾ ನಡುವಿನ ಜಟಾಪಟಿ ಮುಂದುವರಿದಿದ್ದು, ಜು. 31ಕ್ಕೇ ಅಧಿವೇಶನ ಕರೆಯುವಂತೆ ಗೆಹ್ಲೋಟ್ ರಾಜ್ಯಪಾಲರಿಗೆ ಮೂರನೇ ಬಾರಿ ಪ್ರಸ್ತಾವನೆ ಕಳಿಸಿದ್ದಾರೆ. ಮಂಗಳವಾರ ಸಂಪುಟ ಸಭೆ ನಡೆಸಿದ ಗೆಹ್ಲೋಟ್, ರಾಜಕೀಯ ವಿದ್ಯಮಾನ ಹಾಗೂ ರಾಜ್ಯಪಾಲರ ನಡೆ ಕುರಿತು ರ್ಚಚಿಸಿದರು. ಅಧಿವೇಶನ ಕರೆಯಲು ಮತ್ತೊಂದು ಬಾರಿ ಪ್ರಸ್ತಾವನೆ ಸಲ್ಲಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಆದರೆ, ಈ ಪ್ರಸ್ತಾವನೆಯಲ್ಲಿ ಬಹುಮತಯಾಚನೆ ಕುರಿತು ಯಾವುದೇ ಉಲ್ಲೇಖ ಇಲ್ಲ.
ಈ ಹಿಂದೆ ಎರಡು ಬಾರಿ ಗೆಹ್ಲೋಟ್ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಶಾಸಕರಿಗೆ ಕನಿಷ್ಠ 21 ದಿನ ಮೊದಲು ನೋಟಿಸ್ ನೀಡಬೇಕು. ಅಧಿವೇಶನದಲ್ಲಿ 200 ಶಾಸಕರು, 1000ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗುತ್ತಾರೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನಿಸಿದ್ದರು.
ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರಗಳ ಕುರಿತು ರ್ಚಚಿಸಿ, ರಾಜ್ಯಪಾಲರ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜು.31ಕ್ಕೆ ಅಧಿವೇಶನ ನಡೆಸುವಂತೆ ಕೋರಲಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ವಿಶ್ವಾಸಮತ ಯಾಚನೆ ಸಹಿತ ಅಧಿವೇಶನದ ಕಾರ್ಯಸೂಚಿ ಕುರಿತು ಪ್ರಸ್ತಾವನೆಯಲ್ಲಿ ವಿವರ ಇಲ್ಲ ಎನ್ನಲಾಗಿದೆ. ಹೀಗಾಗಿ ಈ ಪ್ರಸ್ತಾವನೆ ಕುರಿತು ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಧಿವೇಶನ ಕರೆಯುವುದು ಸರ್ಕಾರದ ಸಂವಿಧಾನಾತ್ಮಕ ಅಧಿಕಾರ. ಇದರಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಆದರೂ ಅವರ ಎಲ್ಲ ಪ್ರಶ್ನೆಗಳಿಗೆ ನಾವು ಪರಿಷ್ಕೃತ ಪ್ರಸ್ತಾವನೆ ಮೂಲಕ ಉತ್ತರ ನೀಡಿದ್ದೇವೆ. 21 ದಿನ ಮೊದಲು ನೋಟಿಸ್ ನೀಡಬೇಕು ಎಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಆದರೆ ಈಗಾಗಲೇ 10 ದಿನ ಕಳೆದಿದೆ. ಆದರೆ ಅಧಿವೇಶನಕ್ಕೆ ಅವರು ದಿನಾಂಕ ನಿಗದಿ ಮಾಡುತ್ತಿಲ್ಲ ಎಂದು ರಾಜಸ್ಥಾನದ ಸಾರಿಗೆ ಸಚಿವ ಪ್ರತಾಪ್ ಸಿಂಗ್ ದೂರಿದ್ದಾರೆ.
ಗೆಹ್ಲೋಟ್ಗೆ ಪಾಠ ಕಲಿಸುವ ಸಮಯ ಬಂದಿದೆ: ರಾಜಸ್ಥಾನ ರಾಜಕೀಯ ಮೇಲಾಟ ನಡುವೆಯೇ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಸಿಎಂ ಗೆಹ್ಲೋಟ್ ವಿರುದ್ಧ ಕಿಡಿ ಕಾರಿದ್ದಾರೆ. ಗೆಹ್ಲೋಟ್ಗೆ ಪಾಠ ಕಲಿಸುವ ಸಮಯ ಬಂದಿದೆ ಎಂದಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ಬಿಎಸ್ಪಿಯ 6 ಶಾಸಕರು ಕಾಂಗ್ರೆಸ್ ಸೇರಿದ್ದರು. ಇದು ಕಾನೂನಿಗೆ ವಿರುದ್ಧ. ಗೆಹ್ಲೋಟ್ ಸರ್ಕಾರ ವಿರುದ್ಧ ಸುಪ್ರೀಂಕೋರ್ಟ್ಗೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಬಳಿಕ ಗೆಹ್ಲೋಟ್ ಸರ್ಕಾರಕ್ಕೆ ಬಿಎಸ್ಪಿ ಬೇಷರತ್ ಬೆಂಬಲ ನೀಡಿತ್ತು. ಆದರೆ ಇದನ್ನು ದುರುಪಯೋಗ ಮಾಡಿಕೊಂಡ ಕಾಂಗ್ರೆಸ್, ನಮ್ಮ 6 ಶಾಸಕರನ್ನು ಸೆಳೆದುಕೊಂಡಿದೆ. ಇದರಿಂದ ಪಕ್ಷಕ್ಕೆ ಹಾನಿ ಉಂಟಾಗಿದೆ. ವಿಶ್ವಾಸಮತ ಸಾಬೀತು ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ನಮ್ಮ 6 ಶಾಸಕರಿಗೆ ಸೂಚನೆ ನೀಡಿದ್ದೇನೆ. ಇದಕ್ಕೆ ವಿರುದ್ಧವಾಗಿ ಅವರು ನಡೆದುಕೊಂದರೆ, ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು. ಜತೆಗೆ ಸುಪ್ರೀಂಕೋರ್ಟ್ಗೆ ದೂರು ನೀಡಲಾಗು ವುದು ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಬಿಎಸ್ಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾದುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಬಿಜೆಪಿ ಎರಡು ಅರ್ಜಿಗಳನ್ನು ಸಲ್ಲಿಕೆ ಮಾಡಿದೆ.