

ಮೂಡಿಗೆರೆ: ಪಕ್ಷದ ಆಂತರಿಕ ಒಪ್ಪಂದದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿಂದಿನ ಅವಧಿಯಲ್ಲಿ ಬಿಜೆಪಿ 6 ಸ್ಥಾನ ಪಡೆದು, ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ, ಹಿಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮತ ಪಡೆದು ಬಹುಮತದೊಂದಿಗೆ ಬಿಜೆಪಿಯ ಆಂತರಿಕ ಒಪ್ಪಂದದಂತೆ ಮೊದಲ 10 ತಿಂಗಳು ಪಿ.ಜಿ.ಅನುಕುಮಾರ್, ನಂತರ 20 ತಿಂಗಳು ಜೆ.ಬಿ.ಧರ್ಮಪಾಲ್ ಅಧ್ಯಕ್ಷರಾಗುವ ಮೂಲಕ ಪಪಂನಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು.
ಕಾಂಗ್ರೆಸ್ 4 ಜೆಡಿಎಸ್ 1 ಸ್ಥಾನ ಪಡೆದಿತ್ತು. 2ನೇ ಅವಧಿಯಲ್ಲಿ 15 ತಿಂಗಳು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೆ ಆಡಳಿತಾಧಿಕಾರಿ ನೇಮಿಸಲಾಗಿತ್ತು. ನಂತರ 15 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಾಗ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರ ಪತ್ನಿ ಜೆಡಿಎಸ್‌ನ ಏಕೈಕ ಸದಸ್ಯೆ ಗೀತಾ ರಂಜನ್ ಅಜಿರ್ ಕುಮಾರ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಬಿಜೆಪಿ ಸದಸ್ಯ ಜೆ.ಬಿ.ಧರ್ಮಪಾಲ್ ಕೂಡ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದರಿಂದ ಗೀತಾ ರಂಜನ್‌ಅಜಿತ್ ಕುಮಾರ್ ಅಧ್ಯಕ್ಷರಾಗಿದ್ದರು. ಹೊಸಕೆರೆ ರಮೇಶ್ ಉಪಾಧ್ಯಕ್ಷರಾಗಿದ್ದಾರೆ.
ಚುನಾವಣೆಗೂ ಮುನ್ನಾ ಶಾಸಕಿ ನಯನ ಮೋಟಮ್ಮ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 15 ತಿಂಗಳ ಅಧಿಕಾರವಧಿಯ ಪೈಕಿ ಮೊದಲ 5 ತಿಂಗಳು ಗೀತಾ ರಂಜನ್‌ಅಜಿತ್ ಕುಮಾರ್ ನಂತರ 10 ತಿಂಗಳು ಕೆ.ವೆಂಕಟೇಶ್ ಅಧ್ಯಕ್ಷರಾಗಲು ಆಂತರಿಕ ಒಪ್ಪಂದವಾಗಿತ್ತು. ಅದರಂತೆ ಜನವರಿ 28ಕ್ಕೆ 5 ತಿಂಗಳು ಪೂರ್ಣಗೊಂಡಿದೆ. ಫೆಬ್ರವರಿ 3 ರಂದು ಪಪಂನಲ್ಲಿ ಕಾಂಗ್ರೆಸ್ ಸದಸ್ಯರು ಸಭೆ ಸೇರಿದಾಗ, ಅಧ್ಯಕ್ಷರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ನಂತರ ಚಿಕ್ಕಮಗಳೂರಿಗೆ ತೆರಳಿ ಉಪ ವಿಭಾಗಾಧಿಕಾರಿ ರಶ್ಮಿಗೆ ರಾಜೀನಾಮೆ ಸಲ್ಲಿಸಿದ್ದಾರೆ.