ತಮಿಳು ನಿರ್ದೇಶಕ ಗೌತಮ್ ಮೆನನ್ ಆ್ಯಕ್ಷನ್-ಕಟ್ ಹೇಳಿರುವ ‘ಧ್ರುವ ನಚ್ಚತಿರಂ’ ಘೋಷಣೆಯಾದಾಗಿನಿಂದಲೂ ಹಲವಾರು ಅಡೆ-ತಡೆಗಳನ್ನು ಎದುರಿಸುತ್ತಾ ಬಂದಿದೆ. 2013ರಲ್ಲಿ ಘೋಷಣೆಯಾಗಿದ್ದ ಈ ಚಿತ್ರಕ್ಕೆ ಮೊದಲು ನಾಯಕನಾಗಿ ಸೂರ್ಯ ಆಯ್ಕೆಯಾಗಿದ್ದರು. ಚಿತ್ರಕಥೆ ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ಸೂರ್ಯ ತಂಡದಿಂದ ಹೊರನಡೆದಿದ್ದರು. ಬಳಿಕ 2017ರಲ್ಲಿ ವಿಕ್ರಮ್‌ರನ್ನು ನಾಯಕನಾಗಿ ಘೋಷಿಸಿ, ಶೂಟಿಂಗ್ ಆರಂಭಿಸಲಾಯಿತು. ಆದರೂ, ಬಜೆಟ್ ಸಮಸ್ಯೆ, ಕರೊನಾ ಸೇರಿ ಚಿತ್ರಕ್ಕೆ ಸಾಲು ಸವಾಲುಗಳು ಎದುರಾದವು. ಈ ಎಲ್ಲದರ ಮಧ್ಯೆಯೂ 2023ರಲ್ಲಿ ಸಿನಿಮಾ ಪೂರ್ಣಗೊಂಡಿತು. ಬಳಿಕ ಆರ್ಥಿಕ ವ್ಯವಹಾರಗಳ ವಿಚಾರವಾಗಿ ಪಾಲುದಾರರ ನಡುವೆ ಮೂಡಿದ ಭಿನ್ನಭಿಪ್ರಾಯದಿಂದಾಗಿ ‘ಧ್ರುವ ನಚ್ಚತಿರಂ’ ಬಿಡುಗಡೆ ವಿಚಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ಬಳಿಕ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಇದೀಗ ‘ಧ್ರುವ ನಚ್ಚತಿರಂ’ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರಿಂದಾಗಿ ಚಿತ್ರತಂಡ ನಿರಾಳವಾಗಿದೆ. ಹಾಗೆಯೇ, ಎಲ್ಲ ಪಾಲುದಾರರ ಸಭೆ ಕರೆದು ಒಮ್ಮತ ಮೂಡಿಸಲಾಗುವುದು ಎಂದು ತಂಡ ಹೇಳಿಕೊಂಡಿದೆ. ಗೌತಮ್ ಮೆನನ್ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಕೆಲವರು ಈ ಸಿನಿಮಾ ರಿಲೀಸ್‌ಗೆ ತಡೆ ಮಾಡುವ ಮೂಲಕ ನನ್ನ ವೃತ್ತಿಜೀವನವನ್ನು ಕೊನೆಗಾಣಿಸಲು ಯತ್ನಿಸಿದರು. ಈ ಚಿತ್ರಕ್ಕಾಗಿ ನೂರಾರು ಜನ ಕೆಲಸ ಮಾಡಿದ್ದಾರೆ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿಕ್ರಮ್, ರಿತು ವರ್ಮಾ, ಐಶ್ವರ್ಯಾ ರಾಜೇಶ್ ಕಲಾ ಬಳಗದಲ್ಲಿರುವ ಈ ಚಿತ್ರವು ಇದೇ 27ಕ್ಕೆ ತೆರೆ ಮೇಲೆ ಬರಲಿದೆ. -ಏಜೆನ್ಸೀಸ್