ಮೊದ ಮೊದಲು ಗೌತಮ್ ಅದಾನಿಯನ್ನು ಇಷ್ಟಪಡುತ್ತಿರಲಿಲ್ಲ ಪತ್ನಿ ಪ್ರೀತಿ…ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

adani new
Published on

ಮುಂಬೈ: ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ಎಲ್ಲೆಲ್ಲೂ ಪ್ರೀತಿ ಬಗ್ಗೆಯೇ ಮಾತು. ಬಾಲಿವುಡ್​​​ನಿಂದ ಹಿಡಿದು ಬ್ಯುಸಿನೆಸ್ ಕ್ಷೇತ್ರದವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಪ್ರೇಮ ಕಥೆಗಳನ್ನು ಹೊಂದಿದ್ದಾರೆ. ಇವರಲ್ಲಿ ಕೆಲವರು ನಡುರಸ್ತೆಯಲ್ಲಿಯೇ ಪ್ರಪೋಸ್ ಮಾಡಿ ಸೈ ಎನಿಸಿಕೊಂಡರೆ, ಮತ್ತೆ ಕೆಲವರು ಮದುವೆಗೆ ಮನೆಯವರಿಂದ ಅನುಮತಿ ಪಡೆಯಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರ ಪ್ರೀತಿ ಈಡೇರುವುದೇ ಇಲ್ಲ. ಇಂದು ನಾವು ನಿಮಗೆ ಹೇಳುತ್ತಿರುವುದು ಭಾರತದ ಹಿರಿಯ ಉದ್ಯಮಿ ಮತ್ತು ಅದಾನಿ ಸಮೂಹದ ಮಾಲೀಕ ಗೌತಮ್ ಅದಾನಿ ಅವರ ಪ್ರೇಮಕಥೆಯ ಬಗ್ಗೆ. ಎಲ್ಲರಿಗೂ ಗೊತ್ತಿರುವಂತೆ ಅದಾನಿಗೆ ಅವರ ಹೆಂಡತಿಯೇ ದೊಡ್ಡ ಸಪೋರ್ಟ್. ಆದರೆ ಆಕೆ ಗೌತಮ್ ಅದಾನಿಯನ್ನು ಇಷ್ಟಪಡದ ಸಮಯವಿತ್ತು.

ಹೌದು, ಗೌತಮ್ ಅದಾನಿ ಅವರ ಪ್ರೇಮಕಥೆಯು ಬಹಳ ಸಿಂಪಲ್. ಇದನ್ನು ಆರ್‌ಎನ್ ಭಾಸ್ಕರ್ ಅವರ ಪುಸ್ತಕ 'ಗೌತಮ್ ಅದಾನಿ: ರೀಇಮೇಜಿನಿಂಗ್ ಬ್ಯುಸಿನೆಸ್ ಇನ್ ಇಂಡಿಯಾ'ದಲ್ಲಿ ರಿವೀಲ್ ಮಾಡಲಾಗಿದೆ.

ಪ್ರೀತಿ ಅವರು ಗೌತಮ್ ಅದಾನಿಯನ್ನು ಮೊದಲ ನೋಟದಲ್ಲೇ ಇಷ್ಟಪಡಲಿಲ್ಲ ಎಂದು ಆರ್ ಎನ್ ಭಾಸ್ಕರ್ ಅವರ ಪುಸ್ತಕದಲ್ಲಿ ಬಹಿರಂಗಪಡಿಸಲಾಗಿದೆ. ನಿಜ ಹೇಳಬೇಕೆಂದರೆ ಪ್ರೀತಿ ಆ ಸಮಯದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿರಲಿಲ್ಲ. ಮೆಡಿಕಲ್ ಓದುತ್ತಿದ್ದರು. ಆ ಸಮಯದಲ್ಲಿ ಪ್ರೀತಿ ಗೌತಮ್ ಅದಾನಿ ತನಗೆ ಸರಿಯಾದ ಜೋಡಿಯಲ್ಲ ಎಂದು ಭಾವಿಸಿದ್ದರು.

ಆದರೆ ಪ್ರೀತಿಯ ತಂದೆ ಸೇವಂತಿಲಾಲ್ ಮಾತ್ರ ಆಕೆಗೆ ಗೌತಮ್ ಅವರ ಸಾಮರ್ಥ್ಯದ ಬಗ್ಗೆ ಹೇಳಿದರು. ನಂತರ ಅವರು ಗೌತಮ್ ಅದಾನಿಯನ್ನು ಭೇಟಿಯಾಗುವಂತೆ ಮಗಳನ್ನು ಮನವೊಲಿಸಿದರು. ಕೊನೆಗೆ ಇಬ್ಬರೂ ಭೇಟಿಯಾದರು. ಮೊದಲ ಭೇಟಿಯ ನಂತರ ಇಬ್ಬರೂ ಪರಸ್ಪರ ಮಾತನಾಡಿ ನಂತರ ಮದುವೆಯಾಗಲು ಒಪ್ಪಿಕೊಂಡರು. ಕೊನೆಗೆ ಪ್ರೀತಿ ಮತ್ತು ಗೌತಮ್ ಅದಾನಿ ಮೇ 1, 1986 ರಂದು ವಿವಾಹವಾದರು.

ಮದುವೆಯ ನಂತರ ಪ್ರೀತಿ ಅದಾನಿ ಮತ್ತು ಗೌತಮ್ ಅದಾನಿ ಅವರಿಗೆ ಸಮಯ ತುಂಬಾ ಕಷ್ಟಕರವಾಗಿತ್ತು, ಏಕೆಂದರೆ ಗೌತಮ್ ಅದಾನಿ ಕೆಲಸದ ನಿಮಿತ್ತ ಹೆಚ್ಚು ಕಾಲ ಹೊರಗೆ ಇರಬೇಕಾಯಿತು. ಆದರೆ, ಸಮಯ ಸಿಕ್ಕಾಗಲೆಲ್ಲ ಪತ್ನಿ ಹಾಗೂ ಕುಟುಂಬದವರ ಜತೆ ಕಾಲ ಕಳೆಯುತ್ತಿದ್ದರು. ಆರ್ ಎನ್ ಭಾಸ್ಕರ್ ಅವರ ಪುಸ್ತಕದ ಪ್ರಕಾರ, ಗೌತಮ್ ತನ್ನ ಕೆಲಸವನ್ನು ಹೇಗೆ ಮುಗಿಸಬೇಕು ಮತ್ತು ಮನೆಗೆ ಪೂರ್ಣ ಸಮಯವನ್ನು ಹೇಗೆ ಮೀಸಲಿಡಬೇಕು ಎಂದು ತಿಳಿದಿದ್ದರು ಎಂದು ಪ್ರೀತಿ ತಿಳಿಸಿದ್ದಾರೆ.

ದಾಂಪತ್ಯ ಜೀವನಕ್ಕೆ 36 ವರ್ಷ 
ಪ್ರೀತಿ ಅದಾನಿ ಮತ್ತು ಗೌತಮ್ ಅದಾನಿ ದಾಂಪತ್ಯ ಜೀವನಕ್ಕೆ ಈಗ 36 ವರ್ಷ. ಇಂದಿಗೂ ಅವರ ನಡುವೆ ಅದೇ ಪ್ರೀತಿ ಇದೆ. ಇತ್ತೀಚೆಗೆ ಗೌತಮ್ ಅದಾನಿ ಅವರ 60 ನೇ ಹುಟ್ಟುಹಬ್ಬದಂದು ಪ್ರೀತಿ ಹಳೆಯ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, '36 ವರ್ಷಗಳ ಹಿಂದೆ ನಾನು ನನ್ನ ವೃತ್ತಿಜೀವನವನ್ನು ತೊರೆದು ಗೌತಮ್ ಅದಾನಿಯೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ. ಇಂದು ಹಿಂತಿರುಗಿ ನೋಡಿದಾಗ ಆ ವ್ಯಕ್ತಿಯ ಬಗ್ಗೆ ಅಪಾರ ಗೌರವ, ಹೆಮ್ಮೆಯಿದೆ. ಅವರ 60 ನೇ ಹುಟ್ಟುಹಬ್ಬದಂದು, ಅವರ ಉತ್ತಮ ಆರೋಗ್ಯಕ್ಕಾಗಿ ಮತ್ತು ಅವರ ಎಲ್ಲಾ ಕನಸುಗಳು ಈಡೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ ' ಎಂದು ಬರೆದುಕೊಂಡಿದ್ದರು.

100 ಬಿಲಿಯನ್ ಕ್ಲಬ್‌ಗೆ ಅದಾನಿ 
ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಗೌತಮ್ ಅದಾನಿ ಅವರು ತಮ್ಮ ವ್ಯಾಪಾರ ಪ್ರಜ್ಞೆಯಿಂದ ಪ್ರಪಂಚದಾದ್ಯಂತ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ನಿವ್ವಳ ಮೌಲ್ಯವು ಸುಮಾರು $101 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಗೌತಮ್ ಅದಾನಿ ಕಳೆದ ವರ್ಷದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಮತ್ತು ಅನೇಕ ದೊಡ್ಡ ಉದ್ಯಮಿಗಳನ್ನು ಹಿಂದಿಕ್ಕಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net