

ಶಿಕಾರಿಪುರ: ಪಟ್ಟಣದ ಮಂಗಲಭವನದಲ್ಲಿ ಸೆ.26 ಮತ್ತು 27ರಂದು ಉಜ್ಜಯಿನಿ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಮತ್ತು ತಾಲೂಕು ವೀರಶೈವ ಜಂಗಮ ಪುರೋಹಿತ ಅರ್ಚಕ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದು ತಾಲೂಕು ವೀರಶೈವ ಲಿಂಗಾಯತ ಜಂಗಮ ಪುರೋಹಿತ ಅರ್ಚಕರ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಆರಾಧ್ಯಮಠ ಹೇಳಿದರು.
26ರಂದು ಸಂಜೆ 4.30ಕ್ಕೆ ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಗೌರಿಶಂಕರ ಕಲ್ಯಾಣೋತ್ಸವ ಪೂಜೆ, 6.30ಕ್ಕೆ ಶ್ರೀಗೌರಿಗೆ ಮಾಂಗಲ್ಯಧಾರಣೆ ನೆರವೇರಲಿದೆ. ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ಸ್ವಾಮೀಜಿ, ಕಡೇನಂದಿಹಳ್ಳಿ ವೀರಭದ್ರೇಶ್ವರ ಶ್ರೀ, ಶಿರಾಳಕೊಪ್ಪದ ಸಿದ್ದೇಶ್ವರ ಶ್ರೀ, ಸಾಲೂರಿನ ಗುರುಲಿಂಗಜಂಗಮ ಶ್ರೀ, ಸುರಗಿಹಳ್ಳಿ ಮಹಂತಶ್ರೀ, ಶಿಕಾರಿಪುರದ ಚನ್ನಬಸವ ಶ್ರೀಗಳು ಭಾಗವಹಿಸುವರು. ಸಂಸದ ಬಿ.ವೈ.ರಾಘವೇಂದ್ರ, ತೇಜಸ್ವಿನಿ ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಪ್ರೇಮಾ ವಿಜಯೇಂದ್ರ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ ಬೆಂಡೇಕಟ್ಟೆ ಭಾಗವಹಿಸುವರು. ಪುರುಷರು ಪಂಚೆ, ಸ್ತ್ರೀಯರು ಸೀರೆ ಧರಿಸಿ ಆಗಮಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27ರಂದು ಬೆಳಗ್ಗೆ 10ಕ್ಕೆ ಉಜ್ಜಯಿನಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು. 11.30ಕ್ಕೆ ಧರ್ಮಸಭೆ ನಡೆಯಲಿದೆ. ಕಾಳೇನಹಳ್ಳಿಯ ಸಿದ್ದಲಿಂಗ ಶ್ರೀ, ತೊಗರ್ಸಿ ಚನ್ನವೀರ ಶ್ರೀ, ದಿಂಡದಹಳ್ಳಿ ಪಶುಪತಿ ಶಿವಾನಂದ ಶ್ರೀ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶ್ರೀಗಳು, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಪಾಲ್ಗೊಳ್ಳುವರು ಎಂದರು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಧೀರ್ ಮಾರವಳ್ಳಿ, ಮಹಾಂತಯ್ಯ, ಶಿವಕುಮಾರ್ ಕವಲಿ, ವಾಗೀಶಯ್ಯ, ಪ್ರಸಾದಯ್ಯ, ಕೊಟ್ರೇಶಯ್ಯ, ಮೃತ್ಯುಂಜಯ, ನಂದೀಶಯ್ಯ, ಯೋಗೀಶಯ್ಯ. ಚನ್ನವೀರಯ್ಯ ಇದ್ದರು.