

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಎಸ್ಐಟಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿ ರಿಷಿಕೇಶ್ನನ್ನು ನ್ಯಾಯಾಲಯ 15 ದಿನ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಪ್ರಕರಣದ 18ನೇ ಆರೋಪಿ ರಿಷಿಕೇಶ್ನನ್ನು ಸೋಮವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್ಗೆ ಎಸ್ಐಟಿ ತಂಡ ಹಾಜರು ಪಡಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು 30 ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್ಐಟಿ ಪೊಲೀಸರು ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 15 ದಿನ ಎಸ್ಐಟಿ ವಶಕ್ಕೆ ಒಪ್ಪಿಸಿದೆ. ಗೌರಿ ಲಂಕೇಶ್ ಹತ್ಯೆ ನಡೆದ ಎರಡೂವರೆ ವರ್ಷದ ಬಳಿಕ ಜಾರ್ಖಂಡ್ನಲ್ಲಿ ರಿಷಿಕೇಶ್ನನ್ನು ಸೆರೆಹಿಡಿಯಲಾಗಿತ್ತು. ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ಗಳನ್ನು ನಾಶ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಎಸ್ಐಟಿ ಈತನನ್ನು ಬಂಧಿಸಿದೆ ಎನ್ನಲಾಗಿದೆ.