

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಆರ್.ಆರ್. ವೆಂಕಟಪುರಂನಲ್ಲಿರುವ ಎಲ್.ಜಿ. ಪಾಲಿಮರ್ಸ್ ಕೆಮಿಕಲ್ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ನಡೆದ ವಿಷಾನಿಲ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಗ್ಯಾಸ್ ಇಡೀ ಊರಿಗೆ ಹರಡಿದ್ದರಿಂದ ಅಲ್ಲಿದ್ದವರನ್ನು ಗುರುವಾರ ಬೆಳಗ್ಗೆಯೇ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ಸದ್ಯ ಅಧಿಕಾರಿಗಳು ಹೇಳುವ ಪ್ರಕಾರ ಗ್ರಾಮಸ್ಥರು ಇನ್ನು ಎರಡು ದಿನ ಇರುವಲ್ಲಿಯೇ ಆಶ್ರಯ ಪಡೆಯಬೇಕಾಗಿದೆ. ಆ ಬಳಿಕ ತಮ್ಮ ಊರಿಗೆ ತೆರಳುವುದು ಸೂಕ್ತವೆಂದಿದ್ದಾರೆ. ಪುಣೆಯ ವಿಶೇಷ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದು, ಅದರೊಂದಿಗೆ ಗ್ಯಾಸ್ ಲೀಕ್ ಆಗಲು ಕಾರಣ ಏನಿರಬಹುದೆಂಬ ತನಿಖೆಯನ್ನು ನಡೆಸುತ್ತಿದೆ.
ಇನ್ನು ಕಾರ್ಖಾನೆಯ ಎರಡು ಕಿ.ಮೀ ವ್ಯಾಪ್ತಿಯ ಹೊರಗಿರುವ ಜನರು ಯಾವುದೇ ಭಯಪಡಬೇಕಾಗಿಲ್ಲ. ಅವರಿಗೆ ಸ್ಥಳಾಂತರದ ಅವಶ್ಯಕತೆ ಇಲ್ಲವೆಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತರಾದ ಆರ್.ಕೆ. ಮೀನಾ ಅವರು ಭರವಸೆ ನೀಡಿದ್ದಾರೆ.
ಕಾರ್ಖಾನೆಯಲ್ಲಿ ಗ್ಯಾಸ್ ಈಗಲೂ ಲೀಕ್ ಆಗುತ್ತಿದೆ, ಅನಿಲ ಆವಿಗಳು ಹೊರ ಸೂಸುತ್ತಿದ್ದು, ಸ್ಥಳೀಯ ಜನರಿಗೆ ಆತಂಕವನ್ನುಂಟುಮಾಡಿದೆ. ಕಾರ್ಖಾನೆಯ 5 ಕಿ.ಮೀ ವ್ಯಾಪ್ತಿಯಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕೆಂದು ವಿಶಾಖಪಟ್ಟಣಂ ಅಗ್ನಿಶಾಮಕ ಅಧಿಕಾರಿ ಸುರೇಂದ್ರ ಆನಂದ್ ಅವರು ಗುರುವಾರ-ಶಕ್ರವಾರದ ಮಧ್ಯರಾತ್ರಿಯ ಕಾರ್ಯಾಚರಣೆ ವೇಳೆ ಹೇಳಿದ್ದರು.
ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಗ್ಯಾಸ್ ಲೀಕ್ ಆಗುವುದನ್ನು ತಡೆಯಲು ಗುಜರಾತಿನಿಂದ ವಿಶೇಷ ಇಂಡಿಯಾ ಕಾರ್ಗೋ ವಿಮಾನಿಂದ ವಿಶಾಖಪಟ್ಟಣಂಗೆ ಪ್ಯಾರಾ ಟೆರ್ಟಿಯರಿ ಬ್ಯುಟೈಲ್ ಕ್ಯಾಟೆಕೋಲ್ (ಪಿಟಿಬಿಸಿ) ಅನ್ನು ತರಲಾಗಿದೆ.
ಇದರೊಂದಿಗೆ ಹೆಚ್ಚುವರಿಯಾಗಿ 10 ಅಗ್ನಿಶಾಮಕ ವಾಹನ ಸ್ಥಳದಲ್ಲೇ ಬೀಡುಬಿಟ್ಟಿದೆ. ಅಲ್ಲದೆ, ವೈದ್ಯಕೀಯ ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್ ಕೂಡ ಸ್ಥಳದಲ್ಲಿವೆ. ವಿಷಾನಿಲದಿಂದ ಜನರು ಒದ್ದಾಡಿ ಪ್ರಾಣಬಿಟ್ಟಿದ್ದು, ಭೋಪಾಲ್ ಅನಿಲ ದುರಂತವನ್ನು ನೆನಪಿಸುವಂತಿತ್ತು. (ಏಜೆನ್ಸೀಸ್)