

ಅಮರಾವತಿ: ಪ್ರತಿದಿನ ಮನೆ ಬಾಗಿಲಿಗೆ ಬರುವ ಕಸದ ಗಾಡಿಗೆ ಕಸ ಕೊಡುವುದು ಬಿಟ್ಟು, ಬೇರೆಲ್ಲೋ ಎಸೆಯುವ ಬುದ್ಧಿ ನಿಮಗಿದ್ದರೆ ಈ ಸುದ್ದಿ ನಿಮಗಾಗಿಯೇ. ನೀವು ಯಾವ ಕಸವನ್ನು ರಸ್ತೆಯ ಮೇಲೆ ಬೇಕಾಬಿಟ್ಟಿ ಎಸೆಯುತ್ತೀರೋ ಆ ಕಸ ಇನ್ನು ಮುಂದೆ ನಿಮ್ಮ ಮನೆಗೆ ರಿಟರ್ನ್ ಗಿಫ್ಟ್ ಆಗಿ ಬರಲಿದೆ. ಅಷ್ಟೇ ಅಲ್ಲ ಆ ಗಿಫ್ಟ್ಗೆ ನೀವು ದಂಡವನ್ನೂ ತೆರಬೇಕಾಗುತ್ತದೆ.
ಇಂತದ್ದೊಂದು ಕಾನೂನನ್ನು ಆಂಧ್ರ ಪ್ರದೇಶದ ಕಾಕಿನಾಡ ನಗರ ಪಾಲಿಕೆ ಜಾರಿಗೆ ತಂದಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆ ಸಾಕಷ್ಟು ಪ್ರಯತ್ನ ಪಡುತ್ತಿದೆ. ಹಲವು ರೀತಿಯ ಕ್ರಮಗಳನ್ನು ಜಾರಿಗೆ ತಂದಿದೆ. ಹಾಗಿದ್ದರೂ ಜನರು ಪಾಲಿಕೆಗೆ ಸಹಕರಿಸದ ಹಿನ್ನೆಲೆಯಲ್ಲಿ ವಿನೂತನ ರೀತಿಯ ಕ್ರಮವನ್ನು ಅನುಸರಿಸಲಾಗುತ್ತಿದೆ.
ಪಾಲಿಕೆ ಅಧಿಕಾರಿ ಸ್ವಾಪ್ನಿಲ್ ದಿನಕರ ಅವರು ನಗರ ವೀಕ್ಷಣೆಗೆ ತೆರಳಿದ್ದಾಗ ಮಹಿಳೆಯೊಬ್ಬಳು ರಸ್ತೆ ಮೇಲೆ ಕಸ ಎಸೆಯುವುದು ಕಂಡುಬಂದಿದೆ. ತಕ್ಷಣ ಆಕೆಯ ಬಳಿಗೆ ಹೋದ ಅಧಿಕಾರಿಗಳು ಆಕೆಗೆ ಬೈದು, ಕಸವನ್ನು ವಾಪಾಸು ಅವರ ಮನೆಯ ಕಾಂಪೌಂಡ್ ಒಳಗೆ ಹಾಕಿದ್ದಾರೆ. ಅಕ್ಕ ಪಕ್ಕದ ಮನೆಯವರೆದುರು ಮರ್ಯಾದೆ ಕಳೆದುಕೊಂಡ ಮಹಿಳೆ ಸುಮ್ಮನೆ ಕಸವನ್ನು ಎತ್ತಿಕೊಂಡು ಒಳನಡೆದಿದ್ದಾರೆ. ಈ ನಿಯಮ ಆ ಒಂದು ಮಹಿಳೆಗೆ ಮಾತ್ರವಲ್ಲ, ನಗರದ ಪ್ರತಿಯೊಬ್ಬ ಸಾರ್ವಜನಿಕರಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀವು ಕಸ ಎಸೆಯುವುದು ಅಧಿಕಾರಿಗಳ, ಪೌರ ಕಾರ್ಮಿಕರ ಕಣ್ಣಿಗೆ ಬಿದ್ದರೆ, ಆ ಕಸವನ್ನು ನಿಮ್ಮ ಮನೆಗೆ ವಾಪಾಸು ತಂದು ಹಾಕಲಾಗುವುದು. ಸೂಕ್ತ ದಂಡವನ್ನೂ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.