

ಪಿರಿಯಾಪಟ್ಟಣ: ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಇದೀಗ ಅವ್ಯವಸ್ಥೆ ತಾಂಡವವಾಡುತ್ತಿದೆ.
2020-21ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಅಭಿಯಾನದಡಿ ಸ್ವಚ್ಛ ನಗರಿ ಪ್ರಶಸ್ತಿ ನೀಡಲಾಗಿತ್ತು. ಆದರೆ ಇದೀಗ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಲ್ಲಿ ಸಾರ್ವಜನಿಕರ ನಿರ್ಲಕ್ಷೃವೂ ಎದ್ದು ಕಾಣುತ್ತಿದೆ.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿನ ಸೈಂಟ್ ಮೇರಿಸ್ ಆಸ್ಪತ್ರೆಗೆ ಹೊಂದಿಕೊಂಡಂತಿರುವ ಸ್ಮಶಾನ ಪಕ್ಕದ ಜಾಗದಲ್ಲಿ ಕಸದ ರಾಶಿಯೇ ತುಂಬಿದೆ. ಸುತ್ತಮುತ್ತ ಇರುವ ಸಮುದಾಯ ಭವನಗಳು ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಸಂಗ್ರಹವಾಗುವ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಇಲ್ಲಿಗೆ ತಂದು ಸುರಿಯಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಸಮುದಾಯ ಭವನಗಳಲ್ಲಿ ನಡೆಯುವ ಮದುವೆ ಮತ್ತಿತರ ಸಮಾರಂಭಗಳಲ್ಲಿ ಸಂಗ್ರಹವಾಗುವ ಊಟ ಹಾಗೂ ತ್ಯಾಜ್ಯ ವಸ್ತುಗಳನ್ನು ಇಲ್ಲಿಗೆ ತಂದು ಸುರಿಯಲಾಗುತ್ತಿದ್ದು, ಅದನ್ನು ತಿನ್ನಲು ಬರುವ ಬೀದಿ ನಾಯಿಗಳು ಅಡ್ಡಾದಿಡ್ಡಿಯಾಗಿ ಹೆದ್ದಾರಿ ರಸ್ತೆಯಲ್ಲಿ ಓಡಾಡುವುದರಿಂದ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಹಲವು ಬಾರಿ ದ್ವಿಚಕ್ರ ವಾಹನ ಸವಾರರು ಅನಿರೀಕ್ಷಿತವಾಗಿ ರಸ್ತೆಗೆ ಬರುವ ನಾಯಿಗಳಿಗೆ ಡಿಕ್ಕಿ ಹೊಡೆದು ಅಪಘಾತಕ್ಕೊಳಗಾಗಿರುವ ನಿದರ್ಶನಗಳೂ ಇವೆ. ಕೊಡಗು, ಕೇರಳ ಮತ್ತಿತರ ಕಡೆಗಳಿಂದ ಪಿರಿಯಾಪಟ್ಟಣಕ್ಕೆ ಬರುವ ಪ್ರಯಾಣಿಕರು ಕಸದ ರಾಶಿಯನ್ನು ಕಂಡು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಜಾನೆ ಮತ್ತು ಮುಸ್ಸಂಜೆ ವೇಳೆಯಲ್ಲಿ ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಮತ್ತು ನೂತನ ಹೌಸಿಂಗ್ ಬೋರ್ಡ್ ಕಾಲನಿಗೆ ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರು ಈ ಕಸದ ರಾಶಿಯನ್ನು ಕಂಡು ಪುರಸಭೆಯ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಮಶಾನದ ಹಿಂಭಾಗವಿರುವ ಖಾಲಿ ಜಮೀನುಗಳಲ್ಲಿ ಮೇವನ್ನರಸಿ ಬರುವ ಜಾನುವಾರುಗಳೂ ಕಸದ ರಾಶಿ ಮಧ್ಯೆಯೇ ಆಹಾರವನ್ನು ಹುಡುಕುವ ಪ್ರಯತ್ನ ಮಾಡುತ್ತಿವೆ. ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹವಾಗಿರುವ ಆಹಾರ ಉತ್ಪನ್ನಗಳನ್ನು ತಿನ್ನಲು ಮುಂದಾಗುವ ಜಾನುವಾರುಗಳು ಆಹಾರ ಪದಾರ್ಥದೊಂದಿಗೆ ಕೆಜಿಗಟ್ಟಲೆ ಪ್ಲಾಸ್ಟಿಕ್ ಅನ್ನು ತಮ್ಮ ಉದರದೊಳಗೆ ಸೇರಿಸಿಕೊಳ್ಳುತ್ತಿವೆ. ಇದರಿಂದಾಗಿ ತಮಗರಿವಿಲ್ಲದಂತೆಯೇ ಪ್ರಾಣಿಗಳು ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿವೆ.
ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ನೀಡುವಂತೆ ನಿತ್ಯ ಪ್ರಚಾರ ಮಾಡುವ ಪುರಸಭೆ ವಾಹನಗಳು, ಎರಡು ದಿನಕ್ಕೊಮ್ಮೆಯೂ ಕಸ ಸಂಗ್ರಹಿಸಲು ಬಡಾವಣೆಗಳಿಗೆ ಬರುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಅನಿವಾರ್ಯವಾಗಿ ಹೊರತಂದು ಕಸದ ರಾಶಿ ಇರುವೆಡೆ ಸುರಿದು ಹೋಗುತ್ತಿದ್ದಾರೆ ಎಂಬುದು ಕೆಲವರ ಅನಿಸಿಕೆ.
ಇದೇ ಪರಿಸ್ಥಿತಿ ಪಟ್ಟಣದ ಅರಸನಕೆರೆ ಬಳಿಯೂ ಇದ್ದು, ನಿತ್ಯ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಯಾವುದೇ ತಡೆ ಇಲ್ಲದಂತೆ ಅರಸನಕೆರೆ ಸೇರುತ್ತಿದೆ. ಕೆರೆ ನೀರು ಸಂಪೂರ್ಣವಾಗಿ ಮಲಿನಗೊಳ್ಳುತ್ತಿದೆ. ಕೆರೆಯಲ್ಲಿರುವ ಮೀನು ಮತ್ತಿತರ ಜಲಚರಗಳು ಕಲುಷಿತ ನೀರಿನಿಂದಾಗಿ ವಿನಾಶದ ಅಂಚಿಗೆ ತಲುಪಿವೆ. ಕೆರೆ ಸುತ್ತಮುತ್ತ ಮೇಯಲು ಬರುವ ಜಾನುವಾರುಗಳು ಈ ಕಲುಷಿತ ನೀರನ್ನು ಕುಡಿಯುವುದರಿಂದ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಈವರೆಗೂ ಕಾರ್ಯಾರಂಭಗೊಳ್ಳದೆ ಇರುವುದು ಕೊಳಚೆ ನೀರು ಕೆರೆ ಸೇರುತ್ತಿರುವುದಕ್ಕೆ ಪ್ರಮುಖ ಕಾರಣ.
ಈ ಹಿಂದೆ ಸಂತೆ ನಡೆಯುತ್ತಿದ್ದ ಹಳೇ ಮಾರುಕಟ್ಟೆ ಪ್ರದೇಶ ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. 1998ರಲ್ಲಿ ಕೆ.ವೆಂಕಟೇಶ್ ಸಚಿವರಾಗಿದ್ದಾಗ ದೇವಸ್ಥಾನದ ರಸ್ತೆಯಲ್ಲಿ ಪುರಸಭೆ ವತಿಯಿಂದ ವಾಣಿಜ್ಯ ಮಳಿಗೆ ನಿರ್ಮಿಸಿ ಅದರ ಹಿಂಭಾಗದ ಪ್ರದೇಶದಲ್ಲಿ ಕೆ.ವೆಂಕಟೇಶ್ ಮಾರುಕಟ್ಟೆ ಎಂದು ನಾಮಕರಣ ಮಾಡಿ ಅಭಿವೃದ್ಧಿಗೊಳಿಸಿದ್ದರು. ಈ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿದ್ದ ಶನಿವಾರ ಸಂತೆ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದು, ಮರು ಆರಂಭಗೊಳ್ಳಲೇ ಇಲ್ಲ. ಇದೀಗ ಒಂದು ಸಾಲಿನಲ್ಲಿ ಮಾತ್ರ ತರಕಾರಿ ವ್ಯಾಪಾರ ಮಾಡುತ್ತಿದ್ದು, ಇನ್ನುಳಿದ ಪ್ರದೇಶ ನಿರ್ಗತಿಕರು ಮತ್ತು ಅಪರಿಚಿತರ ತಂಗುದಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಮಾರುಕಟ್ಟೆ ಆವರಣದಲ್ಲಿ ತಿಂಗಳಿಗೊಂದು ಅಪರಿಚಿತ ಶವ ಪತ್ತೆಯಾಗುತ್ತಲೇ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
ಇನ್ನು ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಬಿ.ಎಂ.ರಸ್ತೆಯಲ್ಲಿ ರಸ್ತೆಯಿಂದ ಇಂತಿಷ್ಟು ಅಡಿ ಬಿಟ್ಟು ವಾಣಿಜ್ಯ ಮಳಿಗೆ ಇರಬೇಕು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಬಹುತೇಕ ವಾಣಿಜ್ಯ ಮಳಿಗೆಗಳು ರಸ್ತೆಯಂಚಿಗೆ ಬಂದು ನಿಂತಿವೆ. ಇದನ್ನು ಪ್ರಶ್ನಿಸಬೇಕಾದ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಪಾದಚಾರಿಗಳ ಓಡಾಟಕ್ಕೂ ಜಾಗವಿಲ್ಲ. ವಾಣಿಜ್ಯ ಮಳಿಗೆಗಳ ಮುಂಭಾಗ ವಾಹನ ನಿಲುಗಡೆಗೂ ಅವಕಾಶವಿಲ್ಲ. ರಸ್ತೆ ಬದಿಯಲ್ಲಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಜಾಗವೇ ಇಲ್ಲ. ಸಮಸ್ಯೆ ಪರಿಹರಿಸಬೇಕಾದ ಪುರಸಭೆ ಸದಸ್ಯರು ಸುಮ್ಮನಿರುವುದು ಏಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಪಟ್ಟಣದಲ್ಲಿ ಅನೈರ್ಮಲ್ಯ ಹೆಚ್ಚುತ್ತಿದ್ದು ಅಧಿಕಾರಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ. ವಾಣಿಜ್ಯ ಮಳಿಗೆಗಳ ಮುಂಭಾಗ ಒತ್ತುವರಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಅನುಮಾನ ಮೂಡುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಎಲ್ಲೆಂದರಲ್ಲಿ ನಿಲುಗಡೆಯಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಪುರಸಭೆಯಿಂದ ಪ್ರತಿ ಬಡಾವಣೆಗೆ ನಿತ್ಯ ಬರಬೇಕಾದ ಕಸ ಒಯ್ಯುವ ವಾಹನ ಎರಡು ದಿನಕ್ಕೊಮ್ಮೆಯೂ ಬರುವುದಿಲ್ಲ.
ಶ್ರೀನಿವಾಸ್ ಉದ್ಯಮಿ, ಪಿರಿಯಾಪಟ್ಟಣ
ಕಸ ಒಯ್ಯುವ ವಾಹನ ನಿತ್ಯ ನಿಗದಿತ ಬಡಾವಣೆಗಳಿಗೆ ತಪ್ಪದೆ ಹೋಗುವಂತೆ ಸೂಚಿಸಲಾಗುವುದು. ಗೋಣಿಕೊಪ್ಪ ರಸ್ತೆಯ ಸೈಂಟ್ ಮೇರಿಸ್ ಆಸ್ಪತ್ರೆ ಬಳಿ ವಾರದ ಹಿಂದೆ ಕಸ ತೆರವುಗೊಳಿಸಲಾಗಿತ್ತು. ಮತ್ತೆ ಅಷ್ಟೇ ಪ್ರಮಾಣದಲ್ಲಿ ಕಸ ಇರುವುದು ಆಶ್ಚರ್ಯ ತರಿಸಿದೆ. ಆ ಪ್ರದೇಶದಲ್ಲಿ ಯಾರು ಕಸವನ್ನು ತಂದು ಸುರಿಯುತ್ತಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ಮುಂಭಾಗ ಒತ್ತುವರಿಯಾಗುತ್ತಿರುವುದನ್ನು ತಡೆಯಲು ಕ್ರಮ ವಹಿಸಲಾಗುವುದು.
ಕೆ.ಯು.ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ, ಪಿರಿಯಾಪಟ್ಟಣ