

ಲಕ್ಷ್ಮೇಶ್ವರ: ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕೊಳವೆಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸುವ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿ ಮಾಡಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ಸೋಮವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ತಾಲೂಕು ಕೃಷಿಯನ್ನೇ ಆಧರಿಸಿದ್ದರೂ ನದಿ, ದೊಡ್ಡ ಕೆರೆಗಳಿಲ್ಲದೆ ಒಣ ಬೇಸಾಯವೇ ಪ್ರಧಾನವಾಗಿದೆ. ನೀರಾವರಿಗೆ ಕೊಳವೆಬಾವಿ ಆಧಾರವಾಗಿದ್ದು, ಕ್ಷೇತ್ರದ ರೈತ ಫಲಾನುಭವಿಗಳಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿ, ಪಂಪ್, ಮೋಟಾರ್ ಮತ್ತು ವಿದ್ಯುತ್ ಸಂಪರ್ಕ ಒದಗಿಸಿ ಕೊಡುವ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಆಸರೆಯಾಗಿದೆ. ಸರ್ಕಾರ ಕೆಲವೇ ಜನ ರೈತರಿಗೆ ಈ ಯೋಜನೆ ಕಲ್ಪಿಸುವ ಬದಲಾಗಿ ಆದ್ಯತೆಗೆ ತಕ್ಕಂತೆ ಹೆಚ್ಚಿನ ರೈತರಿಗೆ ಈ ಸೌಲಭ್ಯ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಡಿ.ವೈ. ಹುನಗುಂದ, ಮುದಕಣ್ಣ ಗಡದ, ಮಂಜುನಾಥ ತಳವಾರ, ನಟರಾಜ ಪವಾಡದ, ಫಕೀರೇಶ ಕಾಡಣ್ಣವರ, ಮಹೇಶ ಮಾದಾಪೂರ, ಗುರುಬಸವ ಉಳ್ಳಟ್ಟಿ, ಪರಶುರಾಮ ತಳವಾರ, ಕಿರಣ ಲಮಾಣಿ, ಗಣೇಶ ಲಮಾಣಿ ಹಾಗೂ ನಿಗಮದ ಅಧಿಕಾರಿ ಪ್ರದೀಪ ಕೊನ್ನೂರ ಇತರರಿದ್ದರು.