

Robbery: ಸಿನಿಮಾ ಶೈಲಿಯಲ್ಲಿ ಮಾಸ್ಕ್, ಹೆಲ್ಮೆಟ್ ಧರಿಸಿದ ಆರು ದರೋಡೆಕೋರ ಗುಂಪೊಂದು ಜ್ಯುವೆಲ್ಲರಿ ಶಾಪ್ಗೆ ನುಗ್ಗಿ, ಅಲ್ಲಿದ್ದ ಸಿಬ್ಬಂದಿಯ ಕಾಲಿಗೆ ಗುಂಡು ಹಾರಿಸಿ, ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಹೈದರಾಬಾದ್ನ ಚಂದಾನಗರದಲ್ಲಿ ಮಂಗಳವಾರ(ಆಗಸ್ಟ್ 12) ನಡೆದಿದೆ.
ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಚಂದಾನಗರದ ಖಜಾನಾ ಜ್ಯುವೆಲ್ಲರಿ ಶಾಖೆಗೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ಇಟ್ಟಿದ್ದ ಲಾಕರ್ ಕೀ ಕೊಡುವೆ ಕೇಳಿದ್ದಾರೆ. ಅಲ್ಲಿದ್ದ ಮ್ಯಾನೇಜರ್ ವಿರೋಧಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿದ್ದು, ಇತರೆ ಸಿಬ್ಬಂದಿಯನ್ನು ಎದುರಿಸಿ ಬೆಳ್ಳಿ, ಚಿನ್ನಾಭರಣ ದರೋಡೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಬ್ಬಂದಿ ಸುಲೇಮಾನ್, ಬೆಳಗ್ಗೆ ಗನ್ ಹಿಡಿದು ಶಾಪ್ ನುಗ್ಗಿದ ಕಳ್ಳರು, ಚಿನ್ನದ ಆಭರಣಗಳನ್ನು ಇಟ್ಟಿದ್ದ ಲಾಕರ್ ಕೀಲಿಗಳನ್ನು ಕೊಡುವಂತೆ ಹೇಳಿದರು. ಕೀ ಕೊಡಲು ಉಪ ವ್ಯವಸ್ಥಾಪಕ ಸತೀಶ್ ಕುಮಾರ್ ಹಿಂಜರಿದಾಗ ಅವರಿಗೆ ಗುಂಪಿನಲ್ಲಿದ್ದ ಒಬ್ಬ ಅವರ ಕಾಲಿಗೆ ಗುಂಡು ಹಾರಿಸಿದ. ಇಂದು ಅಂಗಡಿಯಲ್ಲಿ ನಮ್ಮ ಕೊನೆಯ ದಿನ ಇದು ಎಂದು ನಾವು ಭಾವಿಸಿದ್ದೇವೆ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸೈಬರಾಬಾದ್ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದರೋಡೆಕೋರರನ್ನು ಪತ್ತೆಹಚ್ಚಲು ಬಹು ತಂಡಗಳನ್ನು ರಚಿಸಿದ್ದಾರೆ. ದುಷ್ಕರ್ಮಿಗಳು ಕನಿಷ್ಠ ನಾಲ್ಕು ಆಯುಧಗಳನ್ನು ಹೊಂದಿದ್ದರು ಎನ್ನಲಾಗಿದ್ದು, ಕೆಲವು ಸಹಚರರು ಹೊರಗೆ ಕಾಯುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ದುಷ್ಕರ್ಮಿಗಳು ಒಟ್ಟು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಸತೀಶ್ ಕಾಲಿಗೆ ಹಾರಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸತೀಶ್ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)