

ಶನಿವಾರಸಂತೆ: ಗೌರಿ -ಗಣೇಶ ಹಬ್ಬದ ಪ್ರಯುಕ್ತ ವಿವಿಧೆಡೆ ವಿವಿಧ ಸೇವಾ ಸಮಿತಿ ವತಿಯಿಂದ ಗೌರಿ-ಗಣೇಶ ಮೂರ್ತಿಯನ್ನು ಶ್ರದ್ಧಾಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು. ಗೌರಿ ಹಬ್ಬದ ದಿನ ಗೌರಿಮೂರ್ತಿ ಮತ್ತು ಗಣೇಶನ ಹಬ್ಬದ ದಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಸಮಿಪದ ಕಣಿವೆ ಬಸವನಹಳ್ಳಿ ಗ್ರಾಮದ ಗೌರಿ ಗಣೇಶ ಸೇವಾ ಸಮಿತಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಗ್ರಾಮದ ಸಾರ್ವಜನಿಕ ಸಮುದಾಯ ಭವನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಗ್ಗರ ಗ್ರಾಮದ ಪುರುಷರು, ಯುವಕರು ಗಂಗಾಪೂಜೆ ನೆರವೇರಿಸಿದ ಬಳಿಕ ಗೌರಿ-ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ವೇದಿಕೆಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಭಕ್ತಾದಿಗಳಿಗೆ ತೀರ್ಥ- ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕ ಲಿಂಗರಾಜು ಪೂಜಾ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.