

ಬಾಳೆಹೊನ್ನೂರು: ಹೋಬಳಿಯಾದ್ಯಂತ ಶನಿವಾರ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲ ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿನಾಯಕನನ್ನು ಪ್ರತಿಷ್ಠಾಪಿಸಿ ಗಣಪತಿಗೆ ನೈವೇದ್ಯ ಅರ್ಪಿಸಲಾಯಿತು. ಇದರೊಂದಿಗೆ ಗಣೇಶನಿಗೆ ಪ್ರಿಯವಾದ ಗರಿಕೆಯನ್ನೂ ಅರ್ಚನೆ ಮಾಡಲಾಯಿತು. ಹೋಬಳಿಯ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ಆಯೋಜಿಸಿದ್ದ ಸಾರ್ವಜನಿಕ ಗಣಪತಿ ಉತ್ಸವದಲ್ಲಿ ಸ್ಥಳೀಯ ಕಲಾವಿದರು ತಯಾರಿಸಿದ ವಿವಿಧ ಮಾದರಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಪಟ್ಟಣದ ವಿದ್ಯಾಗಣಪತಿ ಸಮಿತಿಯಿಂದ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ನೇತೃತ್ವದಲ್ಲಿ ವಿದ್ಯಾಗಣಪತಿ ವಿಗ್ರಹ ಪ್ರತಿಷ್ಠಾಪಿಸಲಾಯಿತು. ತಂಗಳಮನೆಯ ಕಲಾವಿದ ಪ್ರಸಾದ್ ಆಚಾರ್ಯ ರಚನೆಯ ಬೃಹತ್ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ. ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ, ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಕೋಶಾಧಿಕಾರಿ ತ್ರಿವಿಕ್ರಮ ಭಟ್, ಸುಧಾಕರ್, ಪ್ರಮುಖರಾದ ಎಂ.ಎಸ್.ಜಯಪ್ರಕಾಶ್, ಟಿ.ಎಂ.ಉಮೇಶ್, ಟಿ.ಎಂ.ನಾಗೇಶ್ ಕಲ್ಮಕ್ಕಿ, ಕೆ.ಎಸ್.ಹರೀಶ್, ಕೆ.ಕೆ.ವೆಂಕಟೇಶ್, ಹಿರಿಯಣ್ಣ, ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್ ಮತ್ತಿತರರಿದ್ದರು.
ಬಾಳೆಹೊನ್ನೂರು ಹೋಬಳಿಯ ವಿವಿಧೆಡೆ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ರಂಭಾಪುರಿ ಪೀಠ, ಆದರ್ಶನಗರ ಇಟ್ಟಿಗೆ ಸೀಗೋಡು, ಅಕ್ಷರನಗರ, ಪೇಟೆಕೆರೆ, ಸೀಗೋಡು, ಬಂಡಿಹೊಳೆ, ಕಿಚ್ಚಬ್ಬಿ, ಮೇಲ್ಪಾಲ್, ಅರಳೀಕೊಪ್ಪ, ವಾಟುಕೊಡಿಗೆ, ಮುದುಗುಣಿ, ಬನ್ನೂರು, ಹಲಸೂರು, ಕಡ್ಲೇಮಕ್ಕಿ, ಹಿರೇಗದ್ದೆ, ಮಾಗುಂಡಿ, ಜಕ್ಕಣಕ್ಕಿ ಸೇರಿದಂತೆ ವಿವಿಧೆಡೆ ಗಣೇಶ ಸಮಿತಿಗಳು ಆಕರ್ಷಕ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿವೆ.
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ 8 ಕಡೆಗಳಲ್ಲಿ ಚತುರ್ಥಿಯಂದೇ ಸಂಜೆ ವೇಳೆಗೆ ವಿಸರ್ಜನಾ ಕಾರ್ಯಕ್ರಮ ನಡೆಸಿದರು. ಸೆ.9ರಂದು 47 ಕಡೆಗಳಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ಪಟ್ಟಣದ ವಿದ್ಯಾಗಣಪತಿ ಸಮಿತಿಯ ಗಣೇಶೋತ್ಸವದಲ್ಲಿ ಎರಡನೇ ದಿನ ಶಿವಮೊಗ್ಗದ ಹರಿಕಥಾ ವಿದ್ವಾನ್ ಲಲಿತಮ್ಮ ತಂಡದಿಂದ ಚೌತಿ ಚಂದ್ರ ಎಂಬ ಹರಿಕಥಾ ಪ್ರಸಂಗ ನಡೆಯಿತು. ಸೆ.9ರಂದು ಮಧ್ಯಾಹ್ನ, ಸಂಜೆ ಗಣೇಶನ ಸನ್ನಿಧಿಯಲ್ಲಿ ಸಾರ್ವಜನಿಕ ಪೂಜೆ, ರಾತ್ರಿ 8ರಿಂದ ಸಾರ್ವಜನಿಕರಿಗಾಗಿ ಛದ್ಮವೇಷ ಸ್ಪರ್ಧೆ ನಡೆಯಲಿದೆ.