ಅ.2ರಂದು ಜಿಲ್ಲಾ ಕಾಂಗ್ರೆಸ್‌ನಿಂದ ಗಾಂಧಿ ನಡಿಗೆ

dist congress R Prasannakumar
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್
Published on

ಶಿವಮೊಗ್ಗ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನಕ್ಕೆ ನೂರು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ವರ್ಷವಿಡೀ ಕಾರ್ಯಕ್ರಮವಿದ್ದು, ಇದರ ಭಾಗವಾಗಿ ಅ.2ರಂದು ಶಿವಮೊಗ್ಗದಲ್ಲಿ ಗಾಂಧಿ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.

ಕೆಪಿಸಿಸಿ ಸೂಚನೆ ಮೇರೆಗೆ ಅ.2ರಿಂದ 2025ರ ಅ.2ರವರೆಗೆ ಒಂದು ವರ್ಷ ವಿವಿಧ ಕಾರ್ಯಕ್ರಮಗಳನ್ನು ಗ್ರಾಪಂ, ಜಿಲ್ಲಾ ಮತ್ತು ತಾಲೂಕು ಹಾಗೂ ವಾರ್ಡ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ 2ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9.30ಕ್ಕೆ ಶಿವಪ್ಪ ನಾಯಕ ಪ್ರತಿಮೆಯಿಂದ ಟೀ.ಸೀನಪ್ಪ ಶೆಟ್ಟಿ ವೃತ್ತದ ಮಾರ್ಗವಾಗಿ ಕಾಂಗ್ರೆಸ್ ಕಚೇರಿವರೆಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರು ಪಾದಯಾತ್ರೆ ನಡೆಸುವರು. ಬೆಳಗ್ಗೆ 10ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ಎಲ್‌ಇಡಿ ಪರದೆ ಮೂಲಕ ಪ್ರದರ್ಶಿಸಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಾಂಧೀಜಿ ಫೋಟೋ ಹಾಗೂ ಅವರ ಧ್ಯೇಯ ವಾಕ್ಯಗಳನ್ನು ಫ್ಲೆಕ್ಸ್ ಮಾಡಿಸಿ ಪ್ರದರ್ಶಿಸಲಾಗುವುದು. ಗಾಂಧೀಜಿ ಕುರಿತು ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಉಪನ್ಯಾಸ ನೀಡುವರು ಎಂದರು.
ಅಂದು ಜಿಲ್ಲಾ ಕೇಂದ್ರಗಳು ಸೇರಿ ತಾಲೂಕು, ಹೋಬಳಿ, ಗ್ರಾಪಂ ಮಟ್ಟಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯಾ ವಾರ್ಡ್‌ಗೆ ಸಂಬಂಧಿಸಿ ಕನಿಷ್ಠ ಒಂದು ಕಿ.ಮೀ ಪಾದಯಾತ್ರೆ ಕೈಗೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಪಕ್ಷದ ಧ್ವಜದ ಬದಲು ರಾಷ್ಟ್ರ ಧ್ವಜ ಬಳಸಲಾಗುತ್ತದೆ. ಭಾಗವಹಿಸುವ ಎಲ್ಲರೂ ಶ್ವೇತ ವಸ್ತ್ರ ಹಾಗೂ ಗಾಂಧಿ ಟೋಪಿ ಧರಿಸಬೇಕು. ಸಭೆ ನಡೆಯುವ ಜಾಗದಲ್ಲಿ ದೊಡ್ಡ ಪರದೆ ಬಳಸಿ ಪ್ರೊಜೆಕ್ಟರ್ ಮೂಲಕ ಕೆಪಿಸಿಸಿ ಆಯೋಜಿಸಿರುವ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಜೂಮ್ ಲಿಂಕ್ ಕಳಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡರಾದ ಎಸ್.ಟಿ.ಹಾಲಪ್ಪ, ಜಿ.ಡಿ.ಮಂಜುನಾಥ್, ಕಲೀಂ ಪಾಷಾ, ಶಿವಕುಮಾರ್, ಯು.ಶಿವಾನಂದ್, ಡಾ. ತಾನಾಜಿ, ಜಾವೀದ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net