ಗಾಂಧೀಜಿ, ಶಾಸ್ತ್ರೀಜಿ ಅನುಕರಣೀಯರು: ಚೆನ್ನಿ

chenni
ಶಿವಮೊಗ್ಗ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಗಾಂಧಿ ಜಯಂತಿಯನ್ನು ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಡಿ.ಎಸ್.ಅರುಣ್, ಎನ್.ಹೇಮಂತ್, ಬಲ್ಕಿಶ್ ಬಾನು, ಜಿ.ಕೆ.ಮಿಥುನ್‌ಕುಮಾರ್, ಸಿ.ಎಸ್.ಚಂದ್ರಭೂಪಾಲ್, ವಿ.ಅಭಿಷೇಕ್, ಚೇತನ್ ಇದ್ದರು.
Published on

ಶಿವಮೊಗ್ಗ: ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ ಹಾಗೂ ನುಡಿದಂತೆ ನಡೆದ ಲಾಲ್ ಬಹಾದೂರ್ ಶಾಸ್ತ್ರಿ ಅವರ ಅಪ್ರತಿಮ ದೇಶಪ್ರೇಮ, ನಿಷ್ಠೆ ಮತ್ತು ಪ್ರಾಮಾಣಿಕತೆ ಈ ದೇಶದ ಭವ್ಯ ಪರಂಪರೆಯ ಜೀವಾಳವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಗುರುವಾರ ಏರ್ಪಡಿಸಿದ್ದ 156ನೇ ಗಾಂಧಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಜಗತ್ತು ಕಂಡ ಶ್ರೇಷ್ಠ ಪುರುಷ. ಜಗತ್ತಿನ ಎಲ್ಲ ದೇಶಗಳಿಗೆ ಮಾದರಿ ಎನಿಸಿದ ಮಹಾನ್ ವ್ಯಕ್ತಿ. ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ಜಗತ್ತೇ ಮೆಚ್ಚುವಂತಹ ನಾಯಕನಾಗಿ ಬೆಳೆದು ನಿಂತ ಪರಿ ಅನನ್ಯ ಎಂದರು.

ಗಾಂಧೀಜಿ ಬದುಕಿನದ್ದಕ್ಕೂ ಸತ್ಯ, ಧರ್ಮವನ್ನು ಸಾರುತ್ತಾ ರಾಮರಾಜ್ಯದ ಸುಂದರ ಕನಸನ್ನು ಕಂಡವರು. ದೇಶ ಯಾವಾಗಲೂ ಏಕತೆ, ಸಮಗ್ರತೆ ಒಗ್ಗಟ್ಟಿನಿಂದ ಕೂಡಿರಬೇಕೆಂದು ಆಶಿಸಿದ್ದರು. ಸತ್ಯ ಮೇವ ಜಯತೆಯ ಉದಾತ್ತ ಆಶಯವನ್ನು ಅಳವಡಿಸಿಕೊಂಡಿದ್ದ ರಾಜಕಾರಣಿಯಾಗದೆ ಮಹಾತ್ಮರಾದರು ಎಂದು ಹೇಳಿದರು.

ಗಾಂಧಿ ಸತ್ಯ ಪ್ರತಿಪಾದಿಸಿದರೆ ಈ ದೇಶದ ಪ್ರಧಾನಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಪ್ರಮಾಣಿಕತೆಯ ಪ್ರತೀಕವಾಗಿದ್ದರು. ರೈತರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ರೈತರು ಹಾಗೂ ಸೈನಿಕರಿಗೆ ಧೈರ್ಯ ತುಂಬಿದ್ದರು ಎಂದು ತಿಳಿಸಿದರು.

ಗಾಂಧೀಜಿ ಹಾಗೂ ಶಾಸ್ತ್ರೀಜಿ ಆಶಯಗಳು ಬೇರೆಯಾಗಿದ್ದರೂ ಉದ್ದೇಶ ಮಾತ್ರ ಈ ದೇಶದ ಹಿತವೇ ಆಗಿತ್ತು. ಜೀವನದ ಅನೇಕ ತೊಳಲಾಟದಿಂದ ಮೇಲೆದ್ದು ಬಂದು ದೇಶಕ್ಕಾಗಿ ಇವರಿಬ್ಬರೂ ದುಡಿದರು. ಹೀಗಾಗಿ ಇವರಿಬ್ಬರನ್ನೂ ನಾವು ಸಮಾನವಾಗಿ ಕಾಣಬೇಕೆಂದರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕಿಶ್ ಬಾನು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್, ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಮೋಹನ್, ಜಿಪಂ ಸಿಇಒ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ವಾರ್ತಾಧಿಕಾರಿ ಆರ್.ಮಾರುತಿ ಮುಂತಾದವರಿದ್ದರು.

ಗಾಂಧಿ ಜಯಂತಿ ಅಂಗವಾಗಿ ಪ್ರೌಢ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾಡಳಿತ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net