

ಬೆಂಗಳೂರು:
ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಚೇರಿಯಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್‌ಗೌಡ ಮಾತನಾಡಿ, ಅಹಿಂಸೆಯನ್ನು ಪ್ರತಿಪಾದನೆ ಮಾಡುತ್ತಲೇ ಸ್ವತಂತ್ರ ಚಳವಳಿಯ ನೇತರರಾಗಿದ್ದ ಮಹಾತ್ಮ ಬಾಂಧಿಜಿಯ ಆದರ್ಶಗಳು ಇಂದಿಗೂ ಎಲ್ಲರಿಗೂ ಆದರ್ಶವಾಗಿವೆ ಎಂದರು.
ರಾಷ್ಟ್ರದ ಎರಡನೇ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಸಜ್ಜನಿಕೆ ಹಾಗೂ ದಕ್ಷತೆ ಪ್ರಾಮಾಣಿಕತೆಯ ಮೇರು ಸದೃಶ್ಯ ನಾಯಕರಾಗಿದ್ದರು. ಸಂಕಷ್ಟ ಕಾಲದಲ್ಲಿ ರಾಷ್ಟ್ರವನ್ನು ಮುನ್ನಡೆಸಿದ್ದ ಮಹಾಪುರುಷರು. ಎಲ್ಲಾ ಕಾಲಕ್ಕೂ ಸಲ್ಲುವ ಕಾಲಾತೀತ ಆದರ್ಶ ನಾಯಕರು ಎಂದು ಹೇಳಿದರು.
ಗಾಂಧಿಜಿ ಅವರ ಸತ್ಯ ಅಹಿಂಸೆಯ ಮೂಲಕ ಜಗತ್ತಿಗೆ ಸಂದೇಶ ಹಿಂದೆಂದಿಗಿಂತ ಇವತ್ತು ಹೆಚ್ಚು ಪ್ರಸ್ತುತವಾಗಿದೆ. ಪ್ರಕ್ಷುಬ್ಧವಾಗಿರುವ ಜಾಗತಿಕ ಪರಿಸ್ಥಿತಿಗಳಿಗೆ ಗಾಂಧೀ ಮಾರ್ಗವೇ ಶಾಂತಿ ಮಾರ್ಗವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಗಾಂಧೀ ಗೀತೆಗಳ ಗಾಯನ ಹಾಗೂ ಭಗವದ್ಗೀತೆ, ಖುರಾನ್, ಬೈಬಲ್ ಪಠಣ ಹಾಗೂ ವೇದ ಮಂತ್ರಗಳನ್ನು ಪಠಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕರಾದ ಎಂ. ಎಸ್.ನಾರಾಯಣ್, ಪಕ್ಷದ ಬೆಂಗಳೂರು ನಗರ ಮಹಾಪ್ರಧಾನ ಕಾರ್ಯದರ್ಶಿ ಎಸ್.ರಮೇಶ, ಬಿಬಿಎಂಪಿಯ ವಿರೋಧ ಪಕ್ಷದ ಮಾಜಿ ನಾಯಕರಾದ ಟಿ. ತಿಮ್ಮೇಗೌಡ, ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಎ.ಎಂ. ಪ್ರವೀಣ್ ಕುಮಾರ್, ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಿ. ವೇಲು, ಯುವ ಘಟಕದ ಅಧ್ಯಕ್ಷ ಸ್ಯಾಮುಯಲ್, ಕಾರ್ಮಿಕ ವಿಭಾಗದ ಅಧ್ಯಕ್ಷ ಎಂ. ಗೋಪಾಲ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಜನಾರ್ಧನ್ ಮತ್ತಿತರರು ಭಾಗವಹಿಸಿದ್ದರು.