

ಶಿವಮೊಗ್ಗ: ಗಮನ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಮಕ್ಕಳು ಮತ್ತು ಯುವ ಸಮೂಹಕ್ಕೆ ಕಲಿಸುವ ಮೂಲಕ ಉತ್ತಮ ಸಂಸ್ಕಾರ ನೀಡಲು ಹಾಗೂ ಮೌಲಿಕವಾದ ಕಲೆಯನ್ನು ಉಳಿಸಿ-ಬೆಳೆಸಲು ಶಿವಮೊಗ್ಗದಲ್ಲಿ ಗಮಕ ಪಾಠಶಾಲೆ ಆರಂಭಿಸುತ್ತಿದ್ದೇವೆ ಎಂದು ಪಾಠಶಾಲೆ ಕಾರ್ಯದರ್ಶಿ ನಾಗರಾಜ್ ಹೇಳಿದರು.
ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ, ಹೊಸಹಳ್ಳಿ ಕೇಶವಮೂರ್ತಿಗಳ ಶಿಷ್ಯ ಗಮಕಿ ಪ್ರಸಾದ್ ಭಾರದ್ವಾಜ್ ಅವರು ಗಂಧರ್ವ ಗಮಕ ಪಾಠಶಾಲೆ ಆರಂಭಿಸುತ್ತಿದ್ದು, ಜಯನಗರದ ರಾಮಮಂದಿರದಲ್ಲಿ ಜೂ.10ರ ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಮಕ ಒಂದು ವಿಶಿಷ್ಟ ಜಾನಪದ ಕಲೆ. ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ನಮ್ಮ ಸಂಸ್ಕೃತಿಯ ಮಹಾಕಾವ್ಯಗಳನ್ನು ಜನರಿಗೆ ತಲುಪಿಸಿ, ತನ್ಮೂಲಕ ವ್ಯಕ್ತಿಗಳಿಗೆ ಉತ್ತಮ ಸಂಸ್ಕಾರ ನೀಡುತ್ತಿದೆ. ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಗಮಕ ಕಲೆ ಬಹು ಮಹತ್ವದ ಪಾತ್ರ ವಹಿಸುತ್ತಿದೆ. ಶಿವಮೊಗ್ಗ ಜಿಲ್ಲೆ ಗಮಕ ಕಲೆಗೆ ಹೆಸರುವಾಸಿ ಎಂದರು.
ಕರ್ನಾಟಕ ಗಮಕ ಪಾಠಶಾಲೆ ಶಿವಮೊಗ್ಗ ಶಾಖೆ ಅಧ್ಯಕ್ಷ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಮಾಜಿ ಶಾಸಕ, ಗಮಕ ವ್ಯಾಖ್ಯಾನಕಾರ ವೈಎಸ್‌ವಿ ದತ್ತ ಪಾಠಶಾಲೆ ಉದ್ಘಾಟಿಸುವರು. ಶಿವಮೊಗ್ಗ ಶಾಖೆ ಗೌರವಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ವಯೋಲಿನ್ ವಾದಕ ವಿದ್ವಾನ್ ಹೊಸಹಳ್ಳಿ ವೆಂಕಟರಾಮ್ ಪಾಲ್ಗೊಳ್ಳುವರು ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ಬಳಿಕ ಪಾಠಶಾಲೆ ಶಿಕ್ಷಕ ಪ್ರಸಾದ್ ಭಾರದ್ವಾಜ್ ಅವರು ಶ್ರೀ ಕೃಷ್ಣ ಸಂಧಾನ ಕುರಿತ ಕಥಾ ಪ್ರಸಂಗದಲ್ಲಿ ಗಮಕ ವಾಚಕ ಮಾಡುವರು. ವೈಎಸ್‌ವಿ ದತ್ತ ವ್ಯಾಖ್ಯಾನ ಮಾಡುವರು ಎಂದು ತಿಳಿಸಿದರು.
ಪಾಠಶಾಲೆ ಶಿಕ್ಷಕ ಪ್ರಸಾದ್ ಭಾರದ್ವಾಜ್ ಮಾತನಾಡಿ, ಶಿವಮೊಗ್ಗ ಜಯನಗರದ ರಾಮಮಂದಿರ, ಅಶೋಕನಗರದ ಯೋಗಮಂದಿರ, ವಿನೋಬನಗರದ ಕಲಾತ್ಮ ಕಲಾಶಾಲೆ, ಕೋಟೆ ರಸ್ತೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಬಿ.ಬಿ.ರಸ್ತೆಯ ಶ್ರೀ ವಿದ್ಯಾರಣ್ಯ ಗುರುಕುಲದಲ್ಲಿ ಪಾಠಶಾಲೆಯನ್ನು ವಾರಕ್ಕೆರಡು ದಿನ ನಡೆಸಲಾಗುವುದು ಎಂದರು. ಕುಮಾರಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.