ಅದ್ಧೂರಿಯಾಗಿ ಗಣಪತಿ ವಿಸರ್ಜನೆ ಶೋಭಾಯಾತ್ರೆ

8-RNR-04
Published on

ರಾಣೆಬೆನ್ನೂರ: ನಗರದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ವಿರಾಟ ಹಿಂದೂ ಮಹಾಸಭಾ ಗಣಪತಿ, ಕಾಕಿಗಲ್ಲಿಯ ಗಣೇಶ ಹಾಗೂ ಚೌಡೇಶ್ವರಿ ದೇವಸ್ಥಾನ ಬಳಿ ಪ್ರತಿಷ್ಠಾಪನೆ ಮಾಡಿದ್ದ ಅನ್ನದಾತ ಗಣಪತಿ ವಿಸರ್ಜನೆ ಶೋಭಾಯಾತ್ರೆ ಸಂಭ್ರಮ ಸಡಗರದಿಂದ ಅದ್ಧೂರಿಯಾಗಿ ಜರುಗಿತು.

ಇಲ್ಲಿಯ ವಿವಿಧೆಡೆ ಪ್ರತಿಷ್ಠಾಪನೆಗೊಂಡಿದ್ದ ಮೂರು ಗಣಪತಿ ಮೂತಿರ್ಗಳನ್ನು ನಗರದ ಪೋಸ್ಟ್​ ವೃತ್ತಕ್ಕೆ ತಂದು ಅಲ್ಲಿಂದ ಶೋಭಾಯಾತ್ರೆ ಆರಂಭಿಸಲಾಯಿತು. ಇಲ್ಲಿಂದ ಆರಂಭಗೊಂಡ ಮೆರವಣಿಗೆ ಸಂಗಮ್​ ವೃತ್ತ, ಕುಂಬಾರ ಓಣಿ, ದೊಡ್ಡಪೇಟೆ, ಚಕಿಮಕಿ ದುರ್ಗಮ್ಮ ದೇವಸ್ಥಾನ, ಎಂ.ಜಿ. ರಸ್ತೆ, ದುರ್ಗಾ ವೃತ್ತ, ಕುರುಬಗೇರಿ ಕ್ರಾಸ್​ ಮೂಲಕ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಬಸ್​ ನಿಲ್ದಾಣಕ್ಕೆ ಬಂದು ತಲುಪಿತು.

ಬಸ್​ ನಿಲ್ದಾಣದ ಎದುರು ಗಣಪತಿ ಮೂತಿರ್ಗಳಿಗೆ ವಿಶೇಷವಾಗಿ ಸಿಡಿಮದ್ದು ಸುಡಲಾಯಿತು. ಜತೆಗೆ ಮಹಾಮಂಗಳಾರತಿ ನೆರವೇರಿಸಿ ಹರಿಹರದ ತುಂಗಭದ್ರಾ ನದಿಗೆ ವಿರ್ಜಸನೆ ಮಾಡಲಾಯಿತು. ಮಹಿಳೆಯರು ಮತ್ತು ಪುರುಷರ ನೃತ್ಯಕ್ಕಾಗಿ ಆಯೋಜಿಸಲಾಗಿದ್ದ ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು.

ಶಾಸಕ ಪ್ರಕಾಶ ಕೋಳಿವಾಡ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ವಿರಾಟ್​ ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗರಾಜ ಪವಾರ, ಅನ್ನದಾತ ಸೇವಾ ಸಂಸ್ಥೆ ನಾಗರಾಜ ಸಾಲಗೇರಿ, ಪವನಕುಮಾರ ಮಲ್ಲಾಡದ, ಸಂತೋಷ ತೆವರಿ, ರಾಯಣ್ಣ ಮಾಕನೂರ, ಬಸವರಾಜ ಹುಲ್ಲತ್ತಿ, ಮಲ್ಲಣ್ಣ ಅಂಗಡಿ, ಪರಮೇಶಪ್ಪ ಗೂಳಣ್ಣನವರ, ಕುಬೇರಪ್ಪ ಕೊಂಡೋಜ್ಜಿ ಸೇರಿದಂತೆ ಸಾವಿರಾರು ಜನ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net