ಕೋವಿಡ್​ ಲಾಕ್​ಡೌನ್​ ಅವಧಿಯಲ್ಲಿ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಮಾಡಿರುವ ಒಳ್ಳೆಯ ಕೆಲಸ ಏನು ಗೊತ್ತಾ...?

gambhir housemaid
Published on

ನವದೆಹಲಿ: ಟೀಮ್​ ಇಂಡಿಯಾದ ವಿಶ್ವಕಪ್​ ವಿಜೇತ ತಂಡದ ಆರಂಭಿಕರಾಗಿದ್ದ, ಇದೀಗ ಬಿಜೆಪಿಯ ಸಂಸತ್​ ಸದಸ್ಯರಾಗಿರುವ ಗೌತಮ್​ ಗಂಭೀರ್​ ಕೋವಿಡ್​ ಲಾಕ್​ಡೌನ್​ ಅವಧಿಯಲ್ಲಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. ತಮ್ಮ ಮಗುವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡು ಕುಟುಂಬಸ್ಥರಲ್ಲಿ ಒಬ್ಬರಂತೆ ಆಗಿ ಹೋಗಿದ್ದ, ಕಳೆದ ಆರು ವರ್ಷಗಳಿಂದ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಕೆಲಸದಾಕೆಯ ಶವಸಂಸ್ಕಾರವನ್ನು ಸ್ವತಃ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.

ಒಡಿಶಾ ಮೂಲದ ಸರಸ್ವತಿ ಮಹಾಪಾತ್ರ ಎಂಬುವರು ಕಳೆದ 6 ವರ್ಷಗಳಿಂದ ಗಂಭೀರ್​ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಗಂಭೀರ ಅವರ ಮಗುವನ್ನು ಅತ್ಯಂತ ಪ್ರೀತಿಯಿಂದ ಆರೈಕೆ ಮಾಡುತ್ತಾ, ಕುಟುಂಬದ ಭಾಗವಾಗಿ ಹೋಗಿದ್ದರು. ಇಂಥವರು ಅಧಿಕರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ವಿಷಮಿಸಿದ್ದು, ದೆಹಲಿಯ ಸರ್​ ಗಂಗಾರಾಮ್​ ಹಾಸ್ಪಿಟಲ್​ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಏಪ್ರಿಲ್​ 21ರಂದು ಮೃತಪಟ್ಟರು.

ಕೋವಿಡ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಸ್ವತಿ ಅವರ ಶವವನ್ನು ಒಡಿಶಾಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸುವುದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗೌತಮ್​ ಗಂಭೀರ್​ ಅವರೇ ಸರಸ್ವತಿ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಈ ವಿಷಯವನ್ನು ಟ್ವಿಟರ್​ನಲ್ಲಿ ತಿಳಿಸಿರುವ ಅವರು, ನನ್ನ ಮಗುವನ್ನು ತುಂಬಾ ಆಪ್ತವಾಗಿ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಅವರು ಮನೆಗೆಲಸದವರಾಗಿರದೆ, ಕುಟುಂಬಸ್ಥರೇ ಆಗಿ ಹೋಗಿದ್ದರು. ಅವರ ಅಂತ್ಯಸಂಸ್ಕಾರ ನೆರವೇರಿಸುವುದು ನನ್ನ ಕರ್ತವ್ಯವಾಗಿತ್ತು ಎಂದು ಟ್ವೀಟ್​ ಮಾಡಿದ್ದಾರೆ.

ಜಾತಿ, ಮತ, ಧರ್ಮ, ಪಂಥ, ಸಮಾಜಿಕ ಸ್ತರವನ್ನೂ ಮೀರಿ, ಎಲ್ಲರನ್ನೂ ಗೌರವಿಸುವುದರಲ್ಲೇ ನನಗೆ ಹೆಚ್ಚಿನ ನಂಬಿಕೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇದೊಂದೇ ಉತ್ತಮವಾದ ದಾರಿ. ಇದುವೇ ನನ್ನ ಕನಸಿನ ಭಾರತ! ಓಂ ಶಾಂತಿ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.
ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್​ ತಮ್ಮ ಪಕ್ಷದ ಸಂಸದ ಗೌತಮ್​ ಗಂಭೀರ್​ ಅವರ ಈ ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರ ಈ ಆಪ್ತ ಕಾರ್ಯ, ತಮ್ಮ ಮನೆಗಳಿಂದ ದೂರಾಗಿ ಬೇರೊಂದು ಪ್ರದೇಶದಲ್ಲಿ ದುಡಿಯುತ್ತಿರುವ ಸಾವಿರಾರು ಜೀವಿಗಳಲ್ಲಿ ಮಾನವೀಯತೆಯ ನಂಬಿಕೆ ಮೂಡಿಸುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net