

ಬೆಂಗಳೂರು: ಉಪಚುನಾವಣೆ, ಪರಿಷತ್ ಜಿದ್ದಾಜಿದ್ದಿ, ಸ್ಥಳೀಯ ಸಂಸ್ಥೆಗಳ ಮತಸಮರದ ಬಳಿಕ ಬಹು ನಿರೀಕ್ಷಿತ ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಸರ್ಕಾರದ ಹಗ್ಗಜಗ್ಗಾಟ, ಮೀಸಲಾತಿಗೆ ಸಂಬಂಧಿಸಿ ಕೋರ್ಟ್ನಲ್ಲಿರುವ ಪ್ರಕರಣ, ಕರೊನಾ ಕಾರಣಗಳೆಲ್ಲವೂ ಹಿಂದೆ ಸರಿದು ರಾಜ್ಯ ಚುನಾವಣಾ ಆಯೋಗ ಡಿ.22 ಹಾಗೂ 27ರಂದು ಎರಡು ಹಂತದಲ್ಲಿ ಮತದಾನಕ್ಕೆ ದಿನಾಂಕ ನಿಗದಿಪಡಿಸಿದೆ.
ಪ್ರಜಾತಂತ್ರ ವ್ಯವಸ್ಥೆಯ ಕಟ್ಟಕಡೆಯ ಸಂಕೇತವಾಗಿರುವ ಈ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದು ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಹಿಂದಿನ ಸೋಲುಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದು ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಅಸ್ತಿತ್ವ ಸಾಬೀತುಪಡಿಸುವ ಸವಾಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂದಿದೆ.
ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ದೃಷ್ಟಿಯಿಂದ ಚುನಾವಣಾ ಆಯೋಗ ಇದೇ ಮೊದಲ ಬಾರಿ 2 ಹಂತಗಳಲ್ಲಿ ಮತದಾನ ನಡೆಸಲು ತೀರ್ವನಿಸಿದೆ.
ಪ್ರಕ್ರಿಯೆ ಹೇಗೆ?: ಪ್ರತಿ ಜಿಲ್ಲೆಯಲ್ಲಿ ತಾಲೂಕುವಾರು 2 ಹಂತದಲ್ಲಿ ಮತದಾನ ನಡೆಯಲಿದೆ (ಒಂದು ಜಿಲ್ಲೆಯಲ್ಲಿ 6 ತಾಲೂಕುಗಳಿದ್ದರೆ, ಉಭಯ ಹಂತಗಳಲ್ಲಿ ತಲಾ ಮೂರು ತಾಲೂಕುಗಳಲ್ಲಿ ಮತದಾನ )
ಗ್ರಾಪಂ ವ್ಯಾಪ್ತಿಗೆ ಮಾತ್ರ ಸಂಹಿತೆ: ಚುನಾವಣಾ ನೀತಿ ಸಂಹಿತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮಾತ್ರ ಒಳಪಡಲಿದೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.
242 ಗ್ರಾ.ಪಂಗಳಿಗಿಲ್ಲ: 30 ಜಿಲ್ಲೆಗಳ 6,400 ಗ್ರಾಮ ಪಂಚಾಯಿತಿಗಳ ಪೈಕಿ ಅವಧಿ ಮುಕ್ತಾಯವಾಗದ 162 ಗ್ರಾಪಂ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ 6 ಹಾಗೂ 33 ಗ್ರಾಪಂ ಪೂರ್ಣ ಹಾಗೂ 41 ಗ್ರಾಪಂಗಳನ್ನು ಭಾಗಶಃ ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿಸಿರುವುದರಿಂದ ಒಟ್ಟು 242 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವುದಿಲ್ಲ.
ಬೀದರ್ ಜಿಲ್ಲೆಯಲ್ಲಿ ಮಾತ್ರ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಿ ಚುನಾವಣೆ ನಡೆಸಲಾಗುತ್ತದೆ. ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮತಪತ್ರಗಳ ಮೂಲಕವೇ ಮತ ಚಲಾವಣೆ ನಡೆಯಲಿದೆ.
ಅಧಿವೇಶನ ಅಬಾಧಿತ
ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರೂ ವಿಧಾನ ಮಂಡಲ ಅಧಿವೇಶನ ಅಬಾಧಿತ. ಡಿ.7ರಿಂದ 1 ವಾರ ನಡೆಯುವ ಅಧಿವೇಶನಕ್ಕೆ ನೀತಿ ಸಂಹಿತೆ ತೊಡಕಿಲ್ಲ. ಆದರೆ ಶಾಸಕರ ಪಾಲ್ಗೊಳ್ಳುವಿಕೆ ಸಂಖ್ಯೆಯೇ ಅನಿಶ್ಚಿತವಾಗಿರ ಲಿದೆ. ಅಧಿವೇಶನವು ಶಾಸನಸಭೆ ಪ್ರಕ್ರಿಯೆಯಾಗಿರುವ ಕಾರಣ ನೀತಿ ಸಂಹಿತೆ ಅಡ್ಡಿಯಾಗದು. ಗ್ರಾ.ಪಂ. ಮತದಾರರ ಮೇಲೆ ಪ್ರಭಾವಬೀರುವಂತಹ ಹೊಸ ನೀತಿ-ನಿರ್ಧಾರಗಳನ್ನು ಪ್ರಕಟಿಸುವಂತಿಲ್ಲ.ಈಗಾಗಲೇ ಕರಡು ಪ್ರಸ್ತಾವನೆ ಸಚಿವ ಸಂಪುಟದ ಅನುಮೋದನೆ ಪಡೆದ, ನಿಯಮಾವಳಿಗಳು ರಚಿತ ನೀತಿಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಬಹುದಾಗಿದ್ದು, ಮಂಜೂರಾಗಿ ಕೆಲಸದ ಆದೇಶ ಪಡೆದ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಸಮಸ್ಯೆಯಾಗದು ಎಂದು ಮೂಲಗಳು ತಿಳಿಸಿವೆ.
ಕರೊನಾ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆ
ಚುನಾವಣಾ ಆಯೋಗ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ. ಪ್ರತಿ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಸೇರಿದಂತೆ ಮತ್ತಿತರ ನಿಯಮ ಪಾಲಿಸಬೇಕೆಂದು ತಿಳಿಸಲಾಗಿದೆ. ಅಧಿಕಾರಿಗಳ ಅನುಮತಿ ಅಗತ್ಯ: ಸೋಂಕಿತರು, ಸೋಂಕು ಲಕ್ಷಣ ಹೊಂದಿದವರು ಹಾಗೂ ಸಂರ್ಪತರು ಚುನಾವಣೆಯಲ್ಲಿ ಮತನಾದ ಮಾಡಲು ರಿಟರ್ನಿಂಗ್ ಅಧಿಕಾರಿ ಗಳಿಗೆ ಲಿಖಿತ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.
| ಬಿ.ಎಸ್.ಯಡಿಯೂರಪ್ಪ ಸಿಎಂ
ಪಕ್ಷಗಳ ತಾಲೀಮು
ಬಿಜೆಪಿ: ಗ್ರಾಮ ಸ್ವರಾಜ್ಯ ಸಮಾವೇಶದ ಮೂಲಕ ಈಗಾಗಲೇ ಅರ್ಧ ಕರ್ನಾಟಕದಲ್ಲಿ ಪ್ರಚಾರ ಮುಗಿಸಿದೆ. ಸಚಿವರು, ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ
ಕಾಂಗ್ರೆಸ್: ಪ್ರಜಾಪ್ರತಿನಿಧಿ ಹೆಸರಿನಲ್ಲಿ ಪಕ್ಷದ ಕೇಡರ್ ಭದ್ರಗೊಳಿಸಲು ಈ ಚುನಾವಣೆ ಅವಕಾಶ ಬಳಸಿಕೊಳ್ಳಲು ತೀರ್ಮಾನಿಸಿದೆ
ಜೆಡಿಎಸ್: ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡಿ ನೆಲೆ ಭದ್ರಪಡಿಸಿಕೊಳ್ಳಲು ಬಯಸಿದೆ