

ನವದೆಹಲಿ: ಬಾಹ್ಯಾಕಾಶಕ್ಕೆ ಮಾನವರಹಿತ ನೌಕೆ ಕಳಿಸುವ ಯೋಜನೆ ಮುಂದೂಡಿಕೆಯಾಗುವುದು ಖಚಿತವಾಗಿದೆ. 2020ರ ಡಿಸೆಂಬರ್ನಲ್ಲಿ ಈ ನೌಕೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಧರಿಸಿತ್ತು. ಆದರೆ, ಕರೊನಾದಿಂದಾಗಿ ಯೋಜನೆಯ ಸಿದ್ಧತೆಗೆ ಹಿನ್ನಡೆ ಉಂಟಾಗಿದೆ.
ಇನ್ನುಳಿದಿರುವ ನಾಲ್ಕು ತಿಂಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಷ್ಟ ಎಂದು ಈ ಯೋಜನೆಯಲ್ಲಿ ತೊಡಗಿರುವ ವಿಜ್ಞಾನಿಗಳು ತಿಳಿಸಿದ್ದಾರೆ. ಇಸ್ರೊ ಮುಖ್ಯಸ್ಥ ಕೆ. ಶಿವನ್ ನೇತೃತ್ವದ ಉನ್ನತ ಸಮಿತಿಗೂ ಮಾಹಿತಿ ನೀಡಿದ್ದಾರೆ. ಹೀಗಾಗಿ ಕನಿಷ್ಠ ಆರು ತಿಂಗಳು ಈ ಯೋಜನೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಮಾನವರಹಿತ
ಈ ನೌಕೆಯು 2021ರ ಡಿಸೆಂಬರ್ನಲ್ಲಿ ಉಡಾವಣೆ ಮಾಡಲು ಉದ್ದೇಶಿಸಿರುವ ಮಾನವಸಹಿತ ಗಗನನೌಕೆಯ ಪರೀಕ್ಷೆಯ ಭಾಗವಾಗಿದೆ. ಮುಖ್ಯ ಯೋಜನೆಗೂ ಮುನ್ನ ಎರಡು ಸಾರಿ ಮಾನವರಹಿತ ನೌಕೆಯನ್ನು ಉಡಾವಣೆ ಮಾಡಲು ಇಸ್ರೊ ಬಯಸಿದೆ. ಇದರಲ್ಲಿ ಮೊದಲನೆಯದ್ದು ಈ ವರ್ಷದ ಡಿಸೆಂಬರ್ನಲ್ಲಿ ಮತ್ತು 2021ರ ಜುಲೈನಲ್ಲಿ ಎರಡನೆಯ ನೌಕೆಯನ್ನು ಕಳುಹಿಸಲು ತೀರ್ವನಿಸಿತ್ತು.
ಪರೀಕ್ಷಾರ್ಥ ಹಂತದ ಮೊದಲ ನೌಕೆಯ ಉಡಾವಣೆಯೇ ಮುಂದೂಡಿಕೆ ಆಗುತ್ತಿರುವ ಕಾರಣ ಮಾನವಸಹಿತ ಗಗನನೌಕೆ ಉಡಾವಣೆ ಕೂಡ ಮುಂದಕ್ಕೆ ಹೋಗುತ್ತದೆ. ಜತೆಗೆ ಚಂದ್ರಯಾನ -3 ಯೋಜನೆಯೂ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯ ಯೋಜನೆಗೆ ಈಗಾಗಲೇ ಗಗನಯಾತ್ರಿಗಳ ಆಯ್ಕೆ ನಡೆದಿದ್ದು, ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಂಡಿದ್ದ ತರಬೇತಿ ಇತ್ತೀಚೆಗೆ ಮತ್ತೆ ಆರಂಭ ಆಗಿದೆ.