ಗದಗ ಕಲಿಗಳಿಗೆ ಒಳಹೊಡೆತ! ಗೌಡಕಿ ರಾಜಕಾರಣ ಬಿಡಲೊಪ್ಪದ ಕಾಂಗ್ರೆಸ್ | ಒಗ್ಗಟ್ಟಿನ ಕೊರತೆಯಿಂದ ಬಿಜೆಪಿ ವಿಲವಿಲ

ಗದಗ ಚುನಾವಣೆ
Published on

ಶಿವಾನಂದ ಹಿರೇಮಠ
ಗದಗ: ಕಾಂಗ್ರೆಸ್ ಹಾಗೂ ಬಿಜೆಪಿಗೆ ಗದಗ ಮತಕ್ಷೇತ್ರ ಪ್ರತಿಷ್ಠಿತ ಕಣವಾಗಿದೆ. ತೀರಾ ಸಾಮೀಪ್ಯದಲ್ಲಿ ಅವಕಾಶ ಕಳೆದುಕೊಂಡ ಬಿಜೆಪಿ ಈ ಬಾರಿಯಾದರೂ ಕ್ಷೇತ್ರ ಪಡೆಯಬೇಕೆಂದು ತಂತ್ರರೂಪಿಸುತ್ತಿದೆ. ಕ್ಷೇತ್ರದಲ್ಲಿ ಹಿಡಿತ ಕೈತಪ್ಪದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸುತ್ತಿದೆ. ಜೆಡಿಎಸ್​ಗೆ ಕ್ಷೇತ್ರದಲ್ಲಿ ನೆಲೆ ಇಲ್ಲದಿರುವುದರಿಂದ ರಾಷ್ಟ್ರೀಯ ಪಕ್ಷಗಳ ಮಧ್ಯೆಯೇ ನೇರ ಫೈಟ್.

ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್​ನಲ್ಲಿ ಎಚ್.ಕೆ. ಪಾಟೀಲರು ಹೇಳಿದ್ದೇ ಫೈನಲ್. ಗದಗ ವಾಡಿಕೆ ಭಾಷೆಯಲ್ಲಿ ಇದನ್ನು ಗೌಡಕಿ ಎಂದು ಕರೆಯುವುದುಂಟು. ಈ ಧೋರಣೆ ಪಕ್ಷದ ಎಲ್ಲ ವರ್ಗಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ಬಿಜೆಪಿಯಲ್ಲಿ ಒಳಹೊಡೆತಗಳು ಈಗಲೇ ಕಾಣಲಾರಂಭಿಸಿವೆ. ಈ ಸಂಗತಿ ಹಸ್ತ ಪಡೆ ಹಾಗೂ ಕಮಲ ಕಲಿಗಳಿಗೆ ಸಂಕಷ್ಟ ತಂದಿಡುವುದು ನಿಕ್ಕಿ.

ಚುನಾವಣೆ ಸಮೀಪಿ ಸುತ್ತಿದ್ದಂತೆಯೇ ಯುವ ಮತದಾರರನ್ನು ಸೆಳೆಯಲು ಎರಡೂ ಪಕ್ಷಗಳು ಕ್ರೀಡಾ ಯುದ್ಧಕ್ಕೆ ನಾಂದಿ ಹಾಡಿದಂತಿದೆ. ಕ್ರಿಕೆಟ್, ವಾಲಿಬಾಲ್, ಫುಟ್​ಬಾಲ್, ಸಾಂಸ್ಕೃತಿಕ, ಸಾಹಿತ್ಯದ ಸ್ಪರ್ಧೆಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುತ್ತಿರುವ ಪಕ್ಷಗಳು ಈ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ.

ಬದಲಾದ ರಾಜಕೀಯ ಚಿತ್ರಣ: ಕ್ಷೇತ್ರವು ಕಾಂಗ್ರೆಸ್​ನ ಭದ್ರಕೋಟೆ. 14 ವಿಧಾನಸಭೆ ಚುನಾವಣೆಗಳ ಪೈಕಿ 11 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ, 2004ರಿಂದ ರಾಜಕೀಯ ಚಿತ್ರಣ ಬದಲಾಗಿದೆ. ಬಿ.ಎಸ್. ಯಡಿಯೂರಪ್ಪ ಹವಾದಿಂದ ರಾಜ್ಯದಲ್ಲಿ ಬಿಜೆಪಿ

ನೆಲೆ ಕಂಡುಕೊಂಡ ನಂತರ 2004ರಿಂದ ಈಚೇಗೆ ಧ್ರುವೀಕರಣದತ್ತ ಸಾಗುತ್ತಿರುವ ರಾಜಕೀಯಕ್ಕೆ ಗದಗ ಮತಕ್ಷೇತ್ರವೂ ಹೊರತಾಗಿಲ್ಲ. 1957ರಿಂದ ಈಚೇಗಿನ ಚುನಾವಣೆಗಳಲ್ಲಿ ಸರಾಸರಿ 18 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್ 2018ರಲ್ಲಿ ಕೇವಲ 1868 ಮತಗಳ ಅಂತರಿಂದ ವಿಜಯ ದಾಖಲಿಸಿತ್ತು. ಗೆಲುವಿನ ಸಮೀಪಕ್ಕೆ ಬಂದು ಎಡವಿದ ಬಿಜೆಪಿಗೆ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಗಾದೆ ಮಾತು ಇನ್ನೂ ಅರಿವಿಗೆ ಬಾರದೆ ಇರುವುದು ವಿಪರ್ಯಾಸ.

ಪ್ರತಿ ಚುನಾವಣೆಗೂ ಬಿಜೆಪಿ ಬಲವೃದ್ಧಿ

ಗದಗ ಮತಕ್ಷೇತ್ರದ ಇತಿಹಾಸದಲ್ಲೇ 2008ರಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. 2013ರಲ್ಲಿ ಬಿಜೆಪಿ, ಕೆಜೆಪಿ, ಬಿಎಸ್​ಆರ್ ಪಕ್ಷಗಳಿಂದಾಗಿ ಕಾಂಗ್ರೆಸ್ಸಿಗೆ ಜಯದ ಹಾದಿ ಸುಲಭವಾಗಿತ್ತು. 2018ರಲ್ಲೂ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವರು ಸ್ವಪಕ್ಷದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪಕ್ಷ ನಿಷ್ಠೆ ಮರೆತರು. ಬಿಜೆಪಿಯಿಂದ ಸಿಡಿದೆದ್ದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಮತ್ತು ಕೆಲವರಿಂದ ಕೊನೆಯ ಹಂತದಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು. ಪ್ರಸ್ತುತ ಸನ್ನಿವೇಶದಲ್ಲೂ ಬಿಜೆಪಿಗೆ ಅಭ್ಯರ್ಥಿಯ ಘೊಷಣೆ ಸವಾಲಾಗಿದೆ. ಆಕಾಂಕ್ಷಿಗಳ ಪಟ್ಟಿ ದಿನೇದಿನೆ ಬೆಳೆಯುತ್ತಲೇ ಇದೆ. ಟಿಕೆಟ್ ಘೋಷಣೆ ನಂತರ ಲಿಂಗಾಯತ ಒಳಪಂಗಡಗಳ ಮುಖಂಡರು ಜಿದ್ದಿಗೆ ಬಿದ್ದಿರುವಂತೆ ವರ್ತಿಸಿ ಸೋಲನ್ನು ತಾವೇ ಎಳೆದುಕೊಳ್ಳುವ ಉದಾಹರಣೆಗೆ ಈ ಹಿಂದಿನ ಚುನಾವಣೆಗಳೇ ಸಾಕ್ಷಿಯಾಗಿವೆ.

ಕ್ಲಿಷ್ಟದತ್ತ ಕಾಂಗ್ರೆಸ್

ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಿಡಿತವಿದೆ. ಎಚ್.ಕೆ. ಪಾಟೀಲರಿಗೆ ಸಹೋದರ ಡಿ.ಆರ್. ಪಾಟೀಲರೇ ಆನೆ ಬಲ. ಆದರೆ, ಗೆಲುವಿಗಾಗಿ ಇರುವ ಸರಳ ಮಾರ್ಗವನ್ನು ತಾನಾಗಿಯೇ ಕ್ಲಿಷ್ಟವನ್ನಾಗಿಸುತ್ತ ಕಾಂಗ್ರೆಸ್ ಸಾಗಿದೆ. ಪಕ್ಷದ ಜಿಲ್ಲಾ ಸಮಿತಿ, ಶಹರ ಸಮಿತಿಯ ಬಲ ಕುಗ್ಗಿದೆ. ಪಕ್ಷ ಸಂಘಟಣೆ ದೃಷ್ಟಿಯಿಂದ ಚಟುವಟಿಕೆಯಿಂದ ಕೂಡಿದ ಹೊಸಬರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಇಚ್ಛಾಶಕ್ತಿ ಸ್ಥಳೀಯ ಕಾಂಗ್ರೆಸ್ಸಿನಲ್ಲಿ ಕಾಣುತ್ತಿಲ್ಲ. ಹೀಗಾಗಿ ಯುವಪಡೆ ಕೈ ಪಾಳಯದಿಂದ ದೂರ ಸರಿಯುತ್ತಿದೆ.

ಆಕಾಂಕ್ಷಿಗಳು

ಕಾಂಗ್ರೆಸ್: ಎಚ್.ಕೆ. ಪಾಟೀಲ

ಬಿಜೆಪಿ: ಅನಿಲ ಮೆಣಸಿನಕಾಯಿ, ರಾಜು ಕುರಡಗಿ, ವಿಜಯಕುಮಾರ ಗಡ್ಡಿ, ನಾಗೇಶ್ ಹುಬ್ಬಳ್ಳಿ

ಕಾಂಗ್ರೆಸ್ ಪ್ಲಸ್-ಮೈನಸ್

+ ಎಚ್.ಕೆ. ಪಾಟೀಲರಿಗೆ ಕೆ.ಎಚ್. ಪಾಟೀಲ ಮತ್ತು ಡಿ.ಆರ್. ಪಾಟೀಲರ ರಾಜಕಾರಣ ಬಳುವಳಿ.

+ ಎಪಿಎಂಸಿ, ವಾಣಿಜೋದ್ಯಮ, ವರ್ತಕರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೈ ಬಲಾಢ್ಯ.

+ ಮತ ಬ್ಯಾಂಕ್ ಹೊಂದಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆ, ಆರ್​ಡಿಪಿಆರ್ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಡಿತ.

- ಜಾಲತಾಣ ಪ್ರಚಾರದಲ್ಲಿ ತೀವ್ರ ಹಿನ್ನಡೆ. ಇನ್ನೂ ಆರಂಭವಾಗದ ಚುನಾವಣಾ ಪ್ರಚಾರ.

- ಪಕ್ಷ ಸಂಘಟಕರಿಗೆ ಜಿಲ್ಲಾ ಸಮಿತಿಗಳಲ್ಲಿ ಅವಕಾಶ ಕಲ್ಪಿಸಿಲ್ಲ.

- ಏಕಪಕ್ಷೀಯ ನಿರ್ಧಾರ ಆರೋಪ, ಸ್ವಪಕ್ಷೀಯ ಕಾರ್ಯಕರ್ತರ ಅಸಮಾಧಾನ.

ಬಿಜೆಪಿ ಪ್ಲಸ್-ಮೈನಸ್

+ ಯುವಕರನ್ನು ಕೇಂದ್ರೀಕರಿಸಿ ಚುನಾವಣಾ ಪ್ರಚಾರ. ಗದಗ ನಗರಸಭೆಯಲ್ಲಿ ಬಿಜೆಪಿ ಹಿಡಿತ.

+ ಜನಸಂಕಲ್ಪ, ಬೂತ್ ವಿಜಯ ಅಭಿಯಾನ, ಗದಗ ಹಬ್ಬ ಮೂಲಕ ಮನೆ ಮನೆ ಪ್ರಚಾರ.

+ ಒಲವು ತೋರಿಸುತ್ತಿರುವ ಹೊಸ ಮತದಾರರು.

- ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನ ಜತೆ ಹಲವರ ಒಳ ಒಪ್ಪಂದದ ರಾಜಕಾರಣ.

- ಮರುಕಳಿಸುತ್ತಿರುವ ಒಗ್ಗಟ್ಟಿನ ಕೊರತೆ.

- ಆಕಾಂಕ್ಷಿಗಳು-ಕಾರ್ಯಕರ್ತರಲ್ಲೂ ಒಡಕು, ಹಿರಿಯ ಮತದಾರರನ್ನು ತನ್ನತ್ತ ಸೆಳೆಯಲು ವಿಫಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net