ಮಹಿಳೆಯನ್ನು ಗೌರವಿಸುವವರ ಭವಿಷ್ಯ ಉಜ್ವಲ

01
ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಗೆ ಜಿ.ಎಸ್.ಬಸವರಾಜು ಚಾಲನೆ ನೀಡಿದರು. ವೈ.ಎಸ್.ಪಾಟೀಲ, ಡಾ.ಕೆ.ವಿದ್ಯಾಕುಮಾರಿ, ಡಾ.ಎಂ.ರಜನಿ ಇದ್ದರು.
Published on

 ತುಮಕೂರು: ಮಹಿಳೆಯನ್ನು ಗೌರವಿಸುವ ಕುಟುಂಬಗಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ರಾಜ್ಯ ಮಹಿಳಾ ಆಯೋಗ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಎಲ್ಲ ಮಕ್ಕಳಿಗೂ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಮಕ್ಕಳು ತಮ್ಮ ಬಾಲ್ಯ ಜೀವನದಲ್ಲಿ ತಾಯಿಯನ್ನು ನೋಡಿ ಕಲಿಯುತ್ತಾರೆ. ತಾಯಿ ಹೇಗೆ ಕಲಿಸುತ್ತಾಳೆ ಹಾಗೇ ಮಕ್ಕಳು ಕಲಿತು ಬಿಡುತ್ತಾರೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸುವ ಜವಾಬ್ದಾರಿ ತಾಯಿಯದು ಎಂದರು.

ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸಮಾನವಾದ ಅವಕಾಶ ನೀಡಲಾಗಿದೆ. ಇತ್ತೀಚೆಗೆ ನಡೆದ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪುರುಷರಿಗಿಂತ ಮಹಿಳೆಯರೆ ಹೆಚ್ಚು ಪದಕ ಪಡೆದುಕೊಂಡಿದ್ದಾರೆ. ಹೆಣ್ಣನ್ನು ಹಿಂದಿನ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದೇವೆ ಎಂದರು.

ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆ ಸಮಾನತೆಯನ್ನು ಅಪ್ಪಿಕೊಳ್ಳುತ್ತೇವೆ ಎನ್ನುವ ಘೋಷಣೆ ಹೊರಡಿಸಿದೆ. ಸಮಾನತೆಯನ್ನು ಬಾಯಿ ಮಾತಿನಲ್ಲಿ ಹೇಳದೆ ಎಲ್ಲ ಕಡೆಯೂ ಪಾಲಿಸಬೇಕು ಎಂದರು.

ಮಹಿಳೆಯ ಬದುಕು ಅಷ್ಟೊಂದು ಸುಲಭವಲ್ಲ, ಎಲ್ಲ ಹಂತಗಳಲ್ಲಿಯೂ ಕಷ್ಟಗಳನ್ನು ಎದುರಿಸುತ್ತಾ ಬಂದಿದ್ದಾಳೆ. ಆದ್ದರಿಂದ ಅವಳಿಗೆ ಸಮಾಜದಲ್ಲಿ ಒಂದು ಘನತೆ, ಗೌರವ ಕೊಡಬೇಕು. ಹೆಣ್ಣಿನ ಮೇಲೆ ಆಗುವ ದೈಹಿಕ ದೌರ್ಜನ್ಯ ಹಾಗೂ ಮಾನಸಿಕ ದೌರ್ಜನ್ಯವನ್ನು ಎದುರಿಸುತ್ತಾಳೆ, ಇದರ ವಿರುದ್ಧ ಪ್ರತಿಭಟಿಸುವವರ, ಧ್ವನಿ ಎತ್ತುವವರ ಸಂಖ್ಯೆ ಕಡಿಮೆ. ಹೆಚ್ಚಿನ ಮಹಿಳೆಯರು ಕುಟುಂಬದ ಗೌರವವನ್ನು ಉಳಿಸುವುದಕ್ಕಾಗಿ ಹಾಗೂ ಮಕ್ಕಳ ಒಳಿತಿಗಾಗಿ ತಮ್ಮ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಆಕೆಯೇ ನೋವು ಅನುಭವಿಸಿ ಕುಟುಂಬವನ್ನು ಮುನ್ನಡೆಸುತ್ತಾಳೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ.ಎಂ.ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ, ಜಿಲ್ಲಾ ನಿರೂಪಣಾ ಅಧಿಕಾರಿ ಓಂಕಾರಪ್ಪ ಇದ್ದರು.

ಹೆಣ್ಣು ಒಂದು ಮನೆತನದ ಗೌರವದ ಜತೆಗೆ ನಮ್ಮ ಧರ್ಮದಲ್ಲಿರುವ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುತ್ತಾಳೆ. ಹೆಣ್ಣು ಮತ್ತು ಗಂಡು ಎಂಬ ಬೇಧವಿಲ್ಲದೆ ಇಬ್ಬರಿಗೂ ಸಮಾನವಾದ ಗೌರವ ಮತ್ತು ಅವಕಾಶಗಳನ್ನು ರಾಜ್ಯಾಂಗ ನೀಡಿದೆ. | ಜಿ.ಎಸ್.ಬಸವರಾಜು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net