

ಬೆಂಗಳೂರು (ಮಾ.3): ಮಾ.01 ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ್ದ ನಿಗೂಢ ವಸ್ತು ಸ್ಫೋಟ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈಅಲರ್ಟ್ ಮಾಡಲಾಗಿದೆ. ಇದರೊಟ್ಟಿಗೆ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಬಿಎಂಟಿಸಿ ಬಸ್ಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಗೃಹಸಚಿವ ಡಾ. ಜಿ. ಪರಮೇಶ್ವರ, "ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟದ ರೀತಿಯಲ್ಲಿಯೇ ಈ ಪ್ರಕರಣದಲ್ಲಿಯೂ ಸ್ಪೋಟದ ವಸ್ತುಗಳನ್ನು ಜೋಡಿಸಿರುವ ತಾಂತ್ರಿಕ ಸಾಮ್ಯತೆ ಕಂಡು ಬರುತ್ತಿದೆ. ಬ್ಯಾಟರಿ ಬಳಕೆ, ಟೈಮರ್ ಇನ್ನಿತರ ಗಮನಿಸಿದರೆ ತಾಂತ್ರಿಕವಾಗಿ ಅದೇ ರೀತಿ ಜೋಡಿಸಿದ್ದಾರೆ. ಒಂದೇ ತರ ಕಾಣಿಸುತ್ತಿದೆ. ಇಂತಹದ್ದೇ ಸಂಘಟನೆಯವರು ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಊಹಾಪೋಹಾ ಹೇಳಿಕೆ ನೀಡುತ್ತಿದ್ದಾರೆ. ನಾನು ಎಲ್ಲರಿಗೂ ವಿನಂತಿ ಮಾಡುತ್ತೇನೆ. ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು, ನಾನು ಅಥವಾ ಗೃಹ ಇಲಾಖೆಯ ಅಧಿಕಾರಿಗಳು ಹೇಳಿದರೆ ಮಾತ್ರ ಅಧಿಕೃತ ಮಾಹಿತಿ ಎಂದು ಪರಿಗಣಿಸಬೇಕು. ಬಹಳ ಜನ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ಇಲ್ಲದೆ ಹೇಳಿಕೆ ನೀಡುತ್ತಿರುವುದರಿಂದ ಗೊಂದಲವಾಗುತ್ತಿದೆ" ಎಂದರು.
"ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನೀವೆಲ್ಲ ಹೋಗಿ ಕೇಳಿದಾಗ ಹೇಳಿರುತ್ತಾರೆ. ಅದು ಅಧಿಕೃತ ಅಂತ ಎಂದು ಅನಿಸುವುದಿಲ್ಲ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಹೇಳಿಕೆ ನೀಡುವಾಗ ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ. ಸ್ಪೋಟದ ತೀವ್ರತೆ ಬಹಳ ಕಡಿಮೆ ಇರುವುದು ಪರೀಶೀಲನೆಯಲ್ಲಿ ಕಂಡು ಬಂದಿದೆ. ಹೀಗಾಗಿ ದೊಡ್ಡ ಅನಾಹುತ ಸಂಭವಿಸಿಲ್ಲ. ಬಳಕೆಯಾದ ಸ್ಪೋಟಕ ವಸ್ತುಗಳು ಕಡಿಮೆ ಇರಬಹುದು. ಹೆಚ್ಚು ಬಳಕೆ ಮಾಡಿದ್ದರೆ ಸ್ಪೋಟದ ತೀವ್ರತೆ ಜಾಸ್ತಿ ಆಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನೆಟ್ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಸೈಡಿಗೆ ಸಿಡಿದಿದ್ದರೆ ಬಹಳ ಜನರಿಗೆ ಪ್ರಾಣಾಪಾಯ ಆಗುತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ" ಎಂದು ತಿಳಿಸಿದರು.
"ಎನ್ಐಎ ಮತ್ತು ಎನ್ಎಸ್ಜಿ ಅಧಿಕಾರಿಗಳು ಬಂದು ತನಿಖೆ ಮಾಡುತ್ತಿದ್ದಾರೆ. ಸ್ಪೋಟದ ರೀತಿಯನ್ನು ಗಮನಿಸಿರುವ ಎನ್ಐಎ ಅಧಿಕಾರಿಗಳಿಗೆ, ಯಾವ ಸಂಘಟನೆಯವರು ಮಾಡಿರಬಹುದು ಎಂಬ ಅಂದಾಜು ಇರುತ್ತದೆ. ಶೀಘ್ರದಲ್ಲಿ ಆರೋಪಿಗಳನ್ನು ಹಿಡಿಯುತ್ತೇವೆ" ಎಂದರು.