ರಷ್ಯಾ ಆರ್ಥಿಕತೆ ಮೇಲೆ ಜಿ-7 ರಾಷ್ಟ್ರಗಳ ಪ್ರಹಾರ: ಕಚ್ಚಾತೈಲ ಆಮದಿಗೆ ಮಿತಿ ನಿಗದಿ; ಸುಂಕ ಏರಿಕೆ ಪ್ರಸ್ತಾವನೆ..

Modi
ಅಮೆರಿಕ ಅಧ್ಯಕ್ಷ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಆಪ್ತ ಮಾತುಕತೆ.
Published on

ಎಲಮೌ(ಜರ್ಮನಿ): ಕಳೆದ ನಾಲ್ಕು ತಿಂಗಳಿಂದ ಯೂಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದ ಆರ್ಥಿಕತೆಗೆ ಪೆಟ್ಟು ನೀಡಲು ಜಗತ್ತಿನ ಏಳು ಶ್ರೀಮಂತ ದೇಶಗಳ ಕೂಟ ಜಿ7 ನಿರ್ಧರಿಸಿದ್ದು, ಅದಕ್ಕಾಗಿ ತಂತ್ರವನ್ನು ಹೆಣೆಯುತ್ತಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣದ ಮೇಲೆ ಮಿತಿ ಹೇರುವುದು ಹಾಗೂ ಅದು ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಸುಂಕ ಏರಿಸುವ ಮೂಲಕ ಅದರ ಆದಾಯದ ಬಲ ಕುಂದಿಸುವ ಬಗ್ಗೆ ಶೃಂಗ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಸ್ತಾಪಿಸಿದ್ದು ಬ್ರಿಟನ್ ಸಹಿತ ಹಲವು ದೇಶಗಳು ಅದಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

ರಷ್ಯಾದ ಸರಕುಗಳ ಮೇಲಿನ ಸುಂಕ ಹೆಚ್ಚಿಸುವುದು, ರಷ್ಯಾದ ನೂರಾರು ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸುವುದು ಮುಂತಾದ ಕ್ರಮಗಳ ಮೂಲಕವೂ ಯೂಕ್ರೇನ್​ಗೆ ಬೆಂಬಲ ನೀಡುವ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ತೈಲ ಆಮದಿನ ಮಿತಿ ನಿಗದಿ ಪಡಿಸಿದರೆ ಅದರಿಂದ ರಷ್ಯಾದ ಆರ್ಥಿಕ ಪರಿಸ್ಥಿತಿ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಸ್ತ್ರತವಾದ ಯೋಜನೆಯನ್ನು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಮುಂದಿನ ದಿನಗಳಲ್ಲಿ ರೂಪಿಸಲಿದ್ದಾರೆ. ರಷ್ಯಾದಿಂದ ತೈಲ ಆಮದು ಕಡಿತ ಮಾಡುವ ಜಿ 7 ಕೂಟದ ನಿರ್ಧಾರಕ್ಕೆ ಬದ್ಧವಾದರೆ ಭಾರತಕ್ಕೆ ನಷ್ಟವಾಗುವ ಸಂಭವವಿದೆ. ಯಾಕೆಂದರೆ, ಭಾರತದ ತೈಲ ಆಮದಿನಲ್ಲಿ ರಷ್ಯಾದ ಪಾಲೇ ಶೇಕಡ 10ರಷ್ಟಿದೆ. ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ತೈಲ ಗ್ರಾಹಕ ದೇಶವಾಗಿದ್ದು ಕಳೆದ 12 ತಿಂಗಳಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಶೇಕಡ 0.2ರಿಂದ 50 ಪಟ್ಟು ಹೆಚ್ಚಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ರಷ್ಯಾದಿಂದ 25 ಮಿಲಿಯ ಬ್ಯಾರೆಲ್ ತೈಲ ಆಮದು ಕೊಳ್ಳಲಾಗಿದೆ. ಪಾಶ್ಚಿಮಾತ್ಯ ದೇಶಗಳ ಒತ್ತಡವಿದ್ದರೂ ಭಾರತ ಮತ್ತು ಚೀನಾ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕೆಲ ದಿನಗಳ ಹಿಂದೆ ಹೇಳಿದ್ದರು.

ಚಾನ್ಸಲರ್ ಸ್ವಾಗತ: ಜಿ7 ಶೃಂಗ ಸಭೆಯಲ್ಲಿ ಸೋಮವಾರ ಪಾಲ್ಗೊಂಡ ಮೋದಿಯವರನ್ನು ಜರ್ಮನಿ ಚಾನ್ಸಲರ್ ಒಲಾಫ್ ಷೋಲ್ಝ್ ಸ್ವಾಗತಿಸಿದರು. ‘ಸಮಾನ ಜಗತ್ತಿಗಾಗಿ ಪ್ರಗತಿ ಸಾಧಿಸಲು’ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಷೋಲ್ಝ್ ಈ ಸಂದರ್ಭ ಹೇಳಿದರೆಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಂ ಬಾಗ್ಚಿ ತಿಳಿಸಿದ್ದಾರೆ. ಬೈಡೆನ್ ಅವರು ವೇದಿಕೆಯಿಂದ ಮುಂದೆ ಸಾಗಿ ಸಭೆಗೆ ಆಗಮಿಸಿದ ಮೋದಿಯವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.

ಪ್ರಮುಖರೊಂದಿಗೆ ಮೋದಿ ಚರ್ಚೆ: ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ಮಾಡಿದರು. ಮೋದಿ ಮತ್ತು ಮ್ಯಾಕ್ರನ್ ಪರಸ್ಪರ ಅಪ್ಪಿಕೊಂಡು ಆಪ್ತತೆ ಮೆರೆದರು. ಮೇ ತಿಂಗಳಲ್ಲಿ ಜಪಾನ್​ನಲ್ಲಿ ನಡೆದ ಕ್ವಾಡ್ ಶೃಂಗ ಸಭೆಯ ನಂತರ ಮೋದಿ ಮತ್ತು ಬೈಡೆನ್​ರ ಮೊದಲ ಮುಖಾಮುಖಿ ಇದಾಗಿತ್ತು. ಜಿ7 ಕೂಟದ ಸದಸ್ಯರಲ್ಲದ ಭಾರತ, ಅರ್ಜೆಂಟೀನಾ, ಇಂಡೋನೇಶ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾವನ್ನು ಕೂಡ ಜರ್ಮನಿ ಅಧ್ಯಕ್ಷರು ಶೃಂಗ ಸಭೆಗೆ ಆಹ್ವಾನಿಸಿದ್ದರು. ಜರ್ಮನಿ ಪ್ರಸ್ತುತ ಜಿ7 ಕೂಟದ ಅಧ್ಯಕ್ಷ ರಾಷ್ಟ್ರವಾಗಿದೆ.

ಯೂಕ್ರೇನ್ ಅಧ್ಯಕ್ಷರೊಂದಿಗೆ ಚರ್ಚೆ: ರಷ್ಯಾ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಜೊತೆ ಸೋಮವಾರ ವರ್ಚುವಲ್ ಮಾತುಕತೆ ನಡೆಸಿದ ಜಿ7 ಮುಖಂಡರು, ರಷ್ಯಾ ವಿರುದ್ಧ ಕ್ರಮಗಳನ್ನು ಬಿಗಿಗೊಳಿಸುವ ತಮ್ಮ ಬಯಕೆಯನ್ನು ವಿವರಿಸಿದರು. ಯೂಕ್ರೇನ್ ನೆರವಾಗುವ ಯೋಜನೆಯ ಬಗ್ಗೆಯೂ ಅವರು ರ್ಚಚಿಸಿದರು. ಯೂಕ್ರೇನ್ ರಾಜಧಾನಿ ಕಿಯೆವ್ ರಕ್ಷಣೆಗಾಗಿ ಹೊಸ ಕ್ಷಿಪಣಿ ವ್ಯವಸ್ಥೆ ಖರೀದಿಸುವ ಬಗ್ಗೆಯೂ ಅಮೆರಿಕ ಒಂದು ಯೋಜನೆ ರೂಪಿಸುತ್ತಿದೆ.

ಪರಿಸರಸ್ನೇಹಿ ಬೆಳವಣಿಗೆ ಯತ್ನ: ಪರಿಸರಸ್ನೇಹಿ ಬೆಳವಣಿಗೆ, ಶುದ್ಧ ಇಂಧನ, ಸುಸ್ಥಿರ ಜೀವನ ಶೈಲಿ ಮತ್ತು ಜಾಗತಿಕ ಕ್ಷೇಮಕ್ಕಾಗಿ ಭಾರತ ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜಿ7 ಶೃಂಗ ಸಭೆಯಲ್ಲಿ ವಿವರಿಸಿದರು. ‘ಉತ್ತಮ ನಾಳೆಗಾಗಿ ಬಂಡವಾಳ ಹೂಡಿಕೆ’ ವಿಚಾರವಾಗಿ ಮೋದಿ ಒತ್ತು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net