ಯೂಕ್ರೇನ್​ಗೆ ಅಮೆರಿಕದಿಂದ ಮತ್ತಷ್ಟು ಸೇನಾ ನೆರವು

Ukraine
ಕಿಯೆವ್​ನಲ್ಲಿ ಕುಟುಂಬಸ್ಥರ ಶವದ ಜತೆ ಕುಳಿತಿರುವ ವೃದ್ಧೆ.
Published on

ವಾಷಿಂಗ್ಟನ್/ಕಿಯೆವ್: ಸಂಘರ್ಷಪೀಡಿತ ಯೂಕ್ರೇನ್​ಗೆ 750 ಮಿಲಿಯನ್ ಡಾಲರ್ (5,711 ಕೋಟಿ ರೂ.) ಮೊತ್ತದ ಸೇನಾ ನೆರವನ್ನು ಅಮೆರಿಕ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. ಯೂಕ್ರೇನ್​ಗೆ ಪೂರೈಸುತ್ತಿರುವ ಶಸ್ತ್ರಾಸ್ತ್ರದ ವ್ಯಾಪ್ತಿಯನ್ನು ಪೆಂಟಗನ್ (ರಕ್ಷಣಾ ಇಲಾಖೆ) ವಿಸ್ತರಿಸಲು ಬಯಸಿದ್ದು, ಅತ್ಯಾಧುನಿಕ ಮಿಲಿಟರಿ ಸಾಧನಾ, ಶಸ್ತ್ರ ಸಜ್ಜಿತ ಹಮ್ವೀಸ್, ಸೇರಿದಂತೆ ಇನ್ನಿತರ ಉಪಕರಣಗಳನ್ನು ಪೂರೈಸಲು ಸಿದ್ಧವಾಗಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಹೇಳಿದೆ.

ಹೊವಿಟ್ಜರ್ ಫಿರಂಗಿಗಳು, ಕರಾವಳಿ ರಕ್ಷಣಾ ಡ್ರೋನ್​ಗಳು, ರಾಸಾಯನಿಕ, ಜೈವಿಕ ಅಥವಾ ಅಣ್ವಸ್ತ್ರ ಬಳಕೆಯ ಸಂದರ್ಭದಲ್ಲಿ ಯೋಧರಿಗೆ ರಕ್ಷಣೆ ನೀಡುವಂತಹ ಉಡುಪುಗಳು ಹೊಸ ಮಿಲಿಟರಿ ನೆರವಲ್ಲಿ ಒಳಗೊಂಡಿರುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಜೋ ಬೈಡೆನ್ ಆಡಳಿತದ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ರಷ್ಯಾದ ಆಕ್ರಮಣ ಶುರುವಾದ ನಂತರ 1.70 ಬಿಲಿಯನ್ ಡಾಲರ್ (12,949 ಕೋಟಿ ರೂ.) ಮೊತ್ತದ ಮಿಲಿಟರಿ ನೆರವನ್ನು ಯೂಕ್ರೇನ್​ಗೆ ಅಮೆರಿಕ ನೀಡಿದೆ.

ಸಾವಿರ ಸೈನಿಕರು ಶರಣಾಗತಿ ಎಂದ ರಷ್ಯಾ: ರೇವು ನಗರ ಮರಿಯುಪೋಲ್​ನಲ್ಲಿ ಯೂಕ್ರೇನ್​ನ ಒಂದು ಸಾವಿರ ಸೈನಿಕರು ಶರಣಾಗಿದ್ದಾರೆ ಎಂದು ರಷ್ಯಾ ಹೇಳಿದೆ. 36 ಮರಿನ್ ಬ್ರಿಗೇಡ್​ನ 1.026 ಸೈನಿಕರು ಶಸ್ತ್ರ ಕೆಳಗಿಟ್ಟು ಶರಣರಾಗಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಗರದ ಮೇಲೆ ರಷ್ಯಾ ಪಡೆಗಳು ಒಂದು ತಿಂಗಳಿಂದ ದಾಳಿ ನಡೆಸುತ್ತಿದೆ. ಸುಮಾರು 10 ಸಾವಿರ ನಾಗರಿಕರು ಇಲ್ಲಿ ಸತ್ತಿದ್ದಾರೆಂದು ಯೂಕ್ರೇನ್ ಹೇಳಿದೆ.

ಭಾರತೀಯ ಸೇನೆಗೆ ಪಾಠ: ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ ಏಳು ವಾರಗಳಾಗಿದ್ದು, ರಷ್ಯಾ ಆಕ್ರಮಣ ಪರಿ, ಅನುಸರಿಸುತ್ತಿರುವ ತಂತ್ರದ ಪಾಠವನ್ನು ಕಲಿಯುವಂತೆ ರಾಷ್ಟ್ರೀಯ ಭದ್ರತಾ ಯೋಜನೆಯ ನಿವೃತ್ತ ಅಧಿಕಾರಿಗಳು ಸೇನಾ ಕಾರ್ಯಾಲಯಕ್ಕೆ ಸೂಚಿಸಿದ್ದಾರೆ. ಯೂಕ್ರೇನ್ ಮೇಲಿನ ದಾಳಿಯಿಂದ ಮೂರು ರಾಜತಾಂತ್ರಿಕ ಉದ್ದೇಶದಲ್ಲಿ ಎರಡನ್ನು ರಷ್ಯಾ ಸಾಧಿಸಿದೆ. ಯೂಕ್ರೇನ್​ನನ್ನು ನ್ಯಾಟೋಗೆ ಸೇರದಂತೆ ತಡೆದಿರುವುದು ಮತ್ತು ಪೂರ್ವ ಭಾಗದಲ್ಲಿರುವ ಡಾನ್​ಬಾಸ್ ಪ್ರಾಂತ್ಯದ ಮೇಲಿನ ತನ್ನ ಮಾನ್ಯತೆಯನ್ನು ದೃಢಪಡಿಸುವ ಹಾದಿಯಲ್ಲಿ ರಷ್ಯಾ ಇದೆ. ಆದರೆ, ದೀರ್ಘಾವಧಿಯ ಯುದ್ಧದಿಂದ ಮಾಸ್ಕೊಗೆ ಖರ್ಚುವೆಚ್ಚ ಹೆಚ್ಚಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಹೇಳಿದ್ದಾರೆ.

ತನ್ನದೇ ವಾಹನ ಧ್ವಂಸ ಮಾಡಿದ ರಷ್ಯಾ: ಯುದ್ಧೋನ್ಮಾದದಲ್ಲಿರುವ ರಷ್ಯಾ ತನ್ನದೇ ಶಸ್ತ್ರ ಸಜ್ಜಿತ ವಾಹನವನ್ನು ಧ್ವಂಸಗೊಳಿಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಷ್ಯಾ ಪಡೆಗೆ ಮುಜುಗರ ಉಂಟು ಮಾಡಿದೆ. ಕಿಯೆವ್ ಸಮೀಪದ ಡೆಮಿಟ್ರಿವ್ಕಾ ಗ್ರಾಮದಲ್ಲಿ ರಾಷ್ಯಾದ ಯುದ್ಧ ಟ್ಯಾಂಕ್ ತನ್ನದೇ ವಾಹನದ ಮೇಲೆ ದಾಳಿ ಮಾಡಿರುವುದು ಯೂಕ್ರೇನ್​ನ ಡ್ರೋನ್ ಸೆರೆಹಿಡಿದಿದೆ. ಕಿಯೆವ್ ಹೊರ ವಲಯದಿಂದ ಸೇನೆ ಹಿಂತೆಗೆತ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಹೈಲೈಟ್ಸ್

  • ರಷ್ಯಾ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಾಧ್ಯತೆ ಇಲ್ಲ ಎಂದು ಅಮೆರಿಕ ಹೇಳಿದೆ. ಮರಿಯುಪೋಲ್ ನಗರದ ಮೇಲೆ ಸೋಮವಾರ ರಾಸಾಯನಿಕ ಅಸ್ತ್ರ ಹಾಕಲಾಗಿದೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಮೆರಿಕ ಹೇಳಿದೆ.
  • ರಷ್ಯಾ ಅಧ್ಯಕ್ಷ ಪುತಿನ್ ನಿಕಟ ಸಹವರ್ತಿಯಾದ ಒಲಿಗಾರ್ಚ್ ವಿಕ್ಟರ್ ಮೆಡ್ವೆಡ್​ಚುಕ್ ಅವರನ್ನು ವಿಶೇಷ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಯೂಕ್ರೇನ್​ನ ಎಸ್​ಬಿಯು ಗೌಪ್ಯ ಸೇವೆ ಹೇಳಿದೆ.
  • ಯೂಕ್ರೇನ್ ಚೆರ್ನಿಹಿವ್ ನಗರವನ್ನು ರಷ್ಯಾ ಪಡೆಗಳು ವಶಪಡಿಸಿಕೊಂಡ ನಂತರ ಯಾಹಿದ್ನೆ ಗ್ರಾಮದ 300ಕ್ಕೂ ಹೆಚ್ಚು ಜನರನ್ನು ಗನ್ ಪಾಯಿಂಟ್​ನಲ್ಲಿ ಬೆದರಿಸಿದ ರಷ್ಯಾ ಯೋಧರು ಶಾಲೆಯೊಂದರ ತಳಪಾಯದಲ್ಲಿ ಅವರನ್ನು ಕೂಡಿಹಾಕಿದ್ದರು. ಇವರಲ್ಲಿ ಅನೇಕರು ಸಾಯುತ್ತಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net