ಒಂದಲ್ಲ, ಎರಡಲ್ಲ… 3 ಪಪ್ಸ್​ನಲ್ಲಿ ಫಂಗಸ್​​ ಪತ್ತೆ! ವೈರಲ್​ ವಿಡಿಯೋ ಕಂಡು ಬೆಚ್ಚಿಬಿದ್ದ ತಿಂಡಿ ಪ್ರಿಯರು

ವಿಜಯವಾಣಿ - 2024-08-01T185601.598
Published on

ಮನೆ ಆಹಾರಕ್ಕಿಂತ ಹೋಟೆಲ್​ ಅಥವಾ ರಸ್ತೆಬದಿ ಸಿಗುವ ತಿಂಡಿ-ತಿನಿಸುಗಳು ಎಂದರೆ ಜನರಿಗೆ ಅದೇನೋ ವಿಶೇಷವಾದ ಪ್ರೀತಿ, ಒಲವು. ಕಣ್ಣಿಗೆ ಕಂಡರೆ ಸಾಕು ಎರಡು ನಿಮಿಷ ಯೋಚಿಸಿದೆ ಜೇಬಿನಿಂದ ದುಡ್ಡು ತೆಗೆದು, ಅಲ್ಲಿಂದ ಖರೀದಿಸುವುದೇ ತಿನ್ನೋದೆ. ಅದರಲ್ಲೂ ಮುಖ್ಯವಾಗಿ ಬೇಕರಿ ತಿಂಡಿಗಳು. ಆಹಾರ ಪ್ರಿಯರು ಮಾಡುವ ಮೊದಲ ತಪ್ಪಿದು. ತಾವು ತಿನ್ನುವ ಬಗೆಬಗೆಯ ಫಾಸ್ಟ್​ಫುಡ್​ಗಳು ಹೇಗೆ ತಯಾರಾಗುತ್ತದೆ? ಎಷ್ಟು ದಿನಗಳಾದ್ದಾಗಿರಬಹುದು? ಎಂಬ ಸಾಮಾನ್ಯ ಯೋಚನೆಯೂ ಮಾಡುವುದಿಲ್ಲ. ಇದು ಕಡೆಯಲ್ಲಿ ಅವರ ಆರೋಗ್ಯಕ್ಕೇ ಕುತ್ತು ತಂದಿಡುತ್ತದೆ. ಇದಕ್ಕೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಘಟನೆಯೇ ಸಾಕ್ಷಿ.

ವಾರಣಾಸಿಯ ರಾಮಕೊಟಾರದಲ್ಲಿನ ಹೆಸರಾಂತ ರೆಸ್ಟೋರೆಂಟ್​ನಲ್ಲಿ 5-6 ಪಪ್ಸ್​ ಖರೀದಿಸಿದ್ದ ವ್ಯಕ್ತಿ, ಅದನ್ನು ತಿನ್ನುವ ಸಲುವಾಗಿ ಪಪ್ಸ್​ನ ಮೇಲ್ಪದರವನ್ನು ತೆಗೆದು, ಒಳಗಿನ ಪಲ್ಯ ತಿನ್ನಲು ಹೋದಾಗ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಕಾರಣ, ಅದರೊಳಗಿದ್ದ ಪಲ್ಯವು ಅಳಸಿ, ಫಂಗಸ್​ ಬಂದಿದೆ. ಇದನ್ನು ಕಣ್ಣಾರೆ ಕಂಡ ಗ್ರಾಹಕ, ಹೋಟೆಲ್​ನ ಮಾಲೀಕನ ವಿರುದ್ಧ ಸಿಡಿಮಿಡಿಗೊಂಡಿದ್ದು, ವಿಡಿಯೋ ಮೂಲಕ ಎಳೆ ಎಳೆಯಾಗಿ ತೋರಿಸಿ, ವಿವರಿಸಿದ್ದಾನೆ. ತಪ್ಪಿನ ಅರಿವಿನ ಬೆನ್ನಲ್ಲೇ ಇದನ್ನು ವಾಪಾಸ್ ಮಾಡಿ, ಬೇರೆಯದ್ದನ್ನು ಕೊಡುತ್ತೇನೆ ಎಂದ ಮಾಲೀಕರ ಮಾತಿಗೆ ಗ್ರಾಹಕ ಸುತಾರಾಮ್​ ಒಪ್ಪಿಲ್ಲ. ಬದಲಿಗೆ ಹೋಟೆಲ್​ನ ಎಫ್​ಎಸ್​ಎಸ್ಎ​ಐ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದ್ದಾರೆ.

ಪಪ್ಸ್​ ತಯಾರಿಸಿದ್ದವರು ಅನ್ನಪೂರ್ಣ ಸ್ವೀಟ್ ಹೌಸ್ ಮತ್ತು ಬೇಕರ್ಸ್ ಎಂದು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕ್ಷಮಿಸಿ ಎಂದು ರಾಜಿ ಮಾಡಿಕೊಳ್ಳಲು ಬಂದ ಮಾಲೀಕರ ಯಾವುದೇ ಆಫರ್​ಗೂ ಬಗ್ಗದ ಗ್ರಾಹಕ ದೂರು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹದ್ದನ್ನು ನೋಡಿಯೇ ವೈದ್ಯರು ಆಗಾಗ್ಗೆ ಹೇಳುವುದು ಹೊರಗಿನ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net