ಬಾಗೆ ಗ್ರಾಮದಲ್ಲಿ ಮನೆ ಮುಂಭಾಗವೇ ಅಂತ್ಯಕ್ರಿಯೆ!

12skpp3
ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿರುವುದು.
Published on

ಸಕಲೇಶಪುರ: ತಾಲೂಕಿನ ಬಾಗೆ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿರುವ ಮನೆಯೊಂದರ ಮುಂಭಾಗವೇ ಹೆಣವನ್ನು ಹೂಳಲಾಗಿದೆ.

ತಾಲೂಕಿನ ಬಾಗೆ ಸಮೀಪದ ಗ್ರಾಮವೊಂದರ ಕ್ರೈಸ್ತ ಜನಾಂಗಕ್ಕೆ ಸೇರಿದವರೊಬ್ಬರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಇವರ ಅಂತ್ಯಕ್ರಿಯೆಯನ್ನು ಬಾಗೆ ಗ್ರಾಮದ ದಲಿತ ಮಹಿಳೆ ಸರೋಜಮ್ಮ ಎಂಬುವರ ಮನೆಯ ಮುಂಭಾಗವೇ ಮನೆಯವರ ತೀವ್ರ ವಿರೋಧದ ನಡುವೆ ಪೊಲೀಸರ ಬಂದೋಬಸ್ತ್‌ನಲ್ಲ್ಲಿ ಕ್ರೈಸ್ತ ಸಮುದಾಯದವರು ಅಂತ್ಯಕ್ರಿಯೆ ಮಾಡಿದ್ದಾರೆ.

ಘಟನೆಯ ವಿವರ: ತಾಲೂಕಿನ ಬಾಗೆ ಗ್ರಾಮದಲ್ಲಿ ಕ್ರೈಸ್ತರ ಸ್ಮಶಾನವಿದ್ದು ರಾಷ್ಟ್ರೀಯ ಹೆದ್ದಾರಿ 75 ಚತುಷ್ಫಥ ರಸ್ತೆ ಹಾದು ಹೋಗಿದ್ದರಿಂದ ಸ್ಮಶಾನದ ಜಾಗ ಸಂಪೂರ್ಣ ಕಡಿಮೆಯಾಗಿ 4 ಭಾಗಗಳಾಗಿ ತುಂಡಾಗಿದೆ. ಹೆದ್ದಾರಿಯ ಒಂದು ಭಾಗದಲ್ಲಿ ಸರೋಜಮ್ಮ ಎಂಬುವರು ಮನೆ ಮಾಡಿಕೊಂಡು ಹಲವಾರು ವರ್ಷಗಳಿಂದ ವಾಸವಿದ್ದು ಮನೆಯ ಮುಂಭಾಗ ಕ್ರೈಸ್ತರ ಸ್ಮಶಾನಕ್ಕೆ ಸೇರಿರುವ ಜಾಗ ತುಸು ಉಳಿದಿದೆ. ಇದು ಕ್ರೈಸ್ತರಿಗೆ ಸೇರಿರುವ ಸ್ಮಶಾನವೆಂದು ಮಾನವೀಯತೆ ಮರೆತು ಪೊಲೀಸರ ಸಮ್ಮುಖದಲ್ಲೇ ಶುಕ್ರವಾರ ಮನೆಯ ಮುಂಭಾಗವೇ ಅಂತ್ಯಕ್ರಿಯೆ ಮಾಡಿದ್ದಾರೆ.

ಮನೆಯಲ್ಲಿ ಮಹಿಳೆಯರು, ಪುಟಾಣಿ ಮಕ್ಕಳಿದ್ದು ಇದೀಗ ದಿನನಿತ್ಯ ಆತಂಕದಲ್ಲೇ ದಿನದೂಡುವಂತಾಗಿದೆ. ಕೂಡಲೇ ಕ್ರೈಸ್ತರ ಸ್ಮಶಾನಕ್ಕೆ ಬೇರೆಡೆ ಜಾಗ ನೀಡಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಸರೋಜಮ್ಮ ಕುಟುಂಬದವರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net