

ಉತ್ತಮವಾದ, ಉದಾತ್ತವಾದ ಚಿಂತನೆ ರೂಪಿಸಿಕೊಳ್ಳುವುದು, ಹತ್ತಾರು ಜನರಿಗೆ ನೆರವಾಗುವ ಕಾರ್ಯಗಳನ್ನು ಮಾಡಿ, ಆತ್ಮತೃಪ್ತಿ ಯನ್ನು ಪಡೆಯುವುದನ್ನು ಆನಂದ ಎನ್ನಬಹುದು. ಸೇವೆ, ಇತರರಿಗೆ ನೆರವು ನೀಡುವುದರ ಮೂಲಕ ಆನಂದವನ್ನು ಪಡೆಯಬಹುದು. ಕರ್ನಾಟಕದ ಹೆಮ್ಮೆಯ ಕುವರಿ ಅಶ್ವಿನಿ ಅಂಗಡಿ. ಹುಟ್ಟುತ್ತಲೇ ಅಂಧೆ. ಆದರೂ ಜೀವನದ ಕುರಿತು ನಕರಾತ್ಮಕ ಭಾವನೆ ತಾಳಲಿಲ್ಲ. ಆನಂದ, ಆತ್ಮವಿಶ್ವಾಸಗಳಿಂದ ಅವಳ ಜೀವನ ಪ್ರಾರಂಭವಾಯಿತು. ಬಾಲ್ಯ ಶಿಕ್ಷಣವನ್ನು ಮುಗಿಸಿ, ಕಾಲೇಜಿಗೆ ಉನ್ನತ ವ್ಯಾಸಂಗಕ್ಕೆಂದು ಸೇರಿದಳು. ಅವಳು ಪ್ರಥಮ ಸ್ಥಾನವನ್ನು ಪಡೆದಳು. ವಿದ್ಯಾಭ್ಯಾಸ ಮುಗಿಯುವ ಮೊದಲೇ ಕ್ಯಾಂಪಸ್ ಸೆಲೆಕ್ಷನ್ ಆಗಿ ಹೋಯಿತು.
ಯಾವುದೇ ಯುವಕ-ಯವತಿಯು ಆಲೋಚಿಸುವಂತೆ, ಕನಸು ಕಾಣವಂತೆ ಕೈ ತುಂಬಾಕೆಲಸ, ಸಂಬಳ ಇವಳಿಗೆ. ಅನೇಕರು ಇವಳು ಅದೃಷ್ಟವಂತೆ ಎಂದು ಆಲೋಚಿಸಿದರು. ಕೆಲವೇ ದಿನಗಳಲ್ಲಿ ಅಶ್ವಿನಿ ಅಂಗಡಿ ಕೆಲಸವನ್ನು ತೊರೆಯಲು ಆಲೋಚಿಸಿದಳು. ಇದನ್ನು ಕೇಳಿದ ಅನೇಕರಿಗೆ ಆಚ್ಚರಿ. ಕಾರಣವನ್ನು ಕೇಳಿದಾಗ, ಅಶ್ವಿನಿ ಅಂಗಡಿ, ನಾನು ಈ ಎಸಿ ಕ್ಯಾಬಿನ್ನಲ್ಲಿ ಆರಾಮಾಗಿ ಕುಳಿತು ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿರುವುದು ರುಚಿಸುತ್ತಿಲ್ಲ ಎಂದಳು. ನಾನು ನನ್ನಂತೆ ಅನೇಕ ದೃಷ್ಟಿ ಮಾಂದ್ಯರಿಗೆ ದಾರಿದೀಪವಾಗಬೇಕು, ಅವರ ಜೀವನಕ್ಕೆ ನೆರವಾಗಬೇಕು ಎಂಬ ಆಶಯದಿಂದ ಈ ಕೆಲಸವನ್ನು ತೊರೆಯ ಬೇಕೆಂದು ನಿಶ್ಚಯಿಸಿದ್ದೇನೆ ಎಂದಳು. ಇದನ್ನು ಕೇಳಿದ ಅನೇಕರು ನಕ್ಕರು.
ಕೆಲವರು ಇವಳಿಗೆ ಉದ್ಯೋಗ ಸುಲಭವಾಗಿ ಸಿಕ್ಕಿದ್ದರಿಂದ ಅದರ ಬೆಲೆ ತಿಳಿಯದು ಎಂದು ಆಲೋಚಿಸಿದರೆ, ಇನ್ನು ಕೆಲವರು ಹಾಗೆ ಮಾಡದಿರಲು ಬುದ್ಧಿವಾದ ಹೇಳಿದರು. ಆದರೆ ಅಶ್ವಿನಿ ಅಂಗಡಿಯ ನಿರ್ಧಾರ ದೃಢವಾಗಿತ್ತು. ಅವಳು ಕೈತುಂಬಾ ದುಡ್ಡು ಬರುತ್ತಿದ್ದ ಕೆಲಸ ತೊರೆದಳು. ದೃಷ್ಟಿಮಾಂದ್ಯರಿಗೆ ಉಚಿತ ವಸತಿ ಕೇಂದ್ರ ಪ್ರಾರಂಭಿಸಿದಳು. ಪ್ರಾರಂಭದ ದಿನಗಳಲ್ಲಿ ಸ್ವಲ್ಪ ಕಷ್ಟವಾದರೂ, ಈಗ ಬೆಳಕು ಆಕಾಡೆಮಿ ಪ್ರಾರಂಭಿಸಿ, ಅನೇಕರಿಗೆ ದಾರಿದೀಪವಾಗಿದ್ದಾರೆ. ಇದರಿಂದ ಅವರೇ ಹೇಳಿರುವಂತೆ ಆನಂದ, ತೃಪ್ತಿಯ ಅನುಭವ ಬಣ್ಣಿಸಲು ಅಸಾಧ್ಯ.