

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗುವ ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಸುತ್ತಮುತ್ತ ಪಾರ್ಕಿಂಗ್ ಮತ್ತು ನೋ ಪಾರ್ಕಿಂಗ್ ಸ್ಥಳವನ್ನು ನಿಗದಿ ಮಾಡಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ.
ಆ. 8ರಿಂದ 19ರ ವರೆಗೆ ನಡೆಯುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಗಣ್ಯರು, ಸಾರ್ವಜನಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿ 8ರಿಂದ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಲಾಲ್‌ಬಾಗ್ ಸುತ್ತಮುತ್ತಲ ರಸ್ತೆಗಳಲ್ಲಿ ಸುಗಮ ಸಂಚಾರ ಏರ್ಪಡಿಸುವ ನಿಟ್ಟಿನಲ್ಲಿ ಕೆಲ ಬದಲಾವಣೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾ.ಮರಿಗೌಡ ರಸ್ತೆ, ಅಲ್ ಅಮೀನ್ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕೆ.ಎಚ್. ರಸ್ತೆ, ಶಾಂತಿನಗರ, ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಡಾ. ಮರಿಗೌಡ ರಸ್ತೆಯ ಹಾಪ್‌ಕಾಮ್ಸ್‌ನಲ್ಲಿ, ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ಚಿಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಬಹುದು.
ಆದರೆ, ಡಾ.ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗೆ ಕೆ.ಎಚ್.ರಸ್ತೆ, ಕೆ.ಎಚ್.ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರವರೆಗೆ, ಸಿದ್ದಯ್ಯ ರಸ್ತೆ, ಊರ್ವಶಿ ಚಿತ್ರಮಂದಿರ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್‌ವರೆಗೆ, ಬಿಟಿಎಸ್ ಬಸ್ ನಿಲ್ದಾಣ, ಕೃಂಬಿಗಲ್ ರಸ್ತೆ, ಆರ್.ವಿ. ಟೀಚರ್ಸ್ ಕಾಲೇಜು, ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ರಸ್ತೆಯ ಎರಡು ಬದಿಯಲ್ಲಿ ನೋ ಪಾರ್ಕಿಂಗ್ ಆದೇಶಿಸಲಾಗಿದೆ.ಲಾಲ್‌ಬಾಗ್‌ಗೆ ಸಾಕಷ್ಟು ಜನರು ಬರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮೂಹ ಸಾರಿಗೆ ಬಿಎಂಟಿಸಿ, ಮೆಟ್ರೋ, ಕ್ಯಾಬ್‌ಗಳಲ್ಲಿ ಬರುವುದು ಉತ್ತಮ ಎಂದು ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.