

Apple | ಮನೆಗೆ ಎಷ್ಟೇ ಒಳ್ಳೆಯ ಸೇಬುಗಳನ್ನು ತಂದರೂ ಸಹ ಅದನ್ನು ಕತ್ತರಿಸಿದ ಸ್ವಲ್ಪ ಸಮಯದ ಬಳಿಕ ಅದು ಕಪ್ಪು ಬಣ್ಣಕ್ಕೆ ಅಥವಾ ಕಂದು ಬಣ್ಣಕ್ಕೆ ತಿರುಗುವುದು ಸಹಜ. ಇನ್ನೂ ಮನೆಯಿಂದ ಕಟ್ ಮಾಡಿದ ಸೇಬು ಹಣ್ಣನ್ನು ಬಾಕ್ಸ್ನಲ್ಲಿ ಇಟ್ಟುಕೊಂಡು ನೀವು ಕೆಲಸ ಮಾಡುವ ಸ್ಥಳಕ್ಕೆ ತೆಗೆದುಕೊಂಡು ಹೋದರೆ, ಅದು ಕೂಡ ನೀವು ತಿನ್ನುವಷ್ಟರಲ್ಲಿ ತಾಜಾತನವನ್ನ ಕಳೆದುಕೊಂಡಿರುತ್ತದೆ. ಕತ್ತರಿಸಿದ ಸೇಬುಗಳು ಬೇಗನೆ ಕಪ್ಪಾಗುವುದನ್ನು ತಡೆಯಲು ಸರಳ ಉಪಾಯ ಇಲ್ಲಿದೆ ನೋಡಿ.
ಬಣ್ಣ ಬದಲಾಗಲು ಕಾರಣವೇನು?
ಸೇಬು ಹಣ್ಣುಗಳನ್ನು ಕತ್ತರಿಸಿಯೇ ತಿನ್ನಬೇಕಾಗುತ್ತದೆ. ಹಾಗೂ ಮಕ್ಕಳ ಊಟದ ಡಬ್ಬಿಯಲ್ಲಿ ಹಣ್ಣುಗಳನ್ನು ಕತ್ತರಿಸಿದ ಬಳಿಕವೇ ಇಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕತ್ತರಿಸಿದ ಹಣ್ಣುಗಳು ಕಪ್ಪಾಗುವ ಸಮಸ್ಯೆಯನ್ನು ಎಲ್ಲರೂ ಎದುರಿಸಿರುತ್ತಾರೆ. ಕತ್ತರಿಸಿದ ಹಣ್ಣುಗಳು ಬಣ್ಣ ಬದಲಾಯಿಸಿದಾಗ ಯಾರಿಗೂ ಇಷ್ಟವಾಗುವುದಿಲ್ಲ ಮತ್ತು ಅದು ಹಣ್ಣುಗಳನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ನೀವು ಎಷ್ಟೇ ಒಳ್ಳೆಯ ಹಾಗೂ ಉತ್ತಮ ಸೇಬನ್ನು ತಂದರೂ ಕತ್ತರಿಸಿದ ಸ್ವಲ್ಪ ಸಮಯದ ನಂತರ ಅದು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಕಾರಣ ಏನೆಂದರೆ, ಸೇಬನ್ನು ಕತ್ತರಿಸಿದ ತಕ್ಷಣ ಅದು ಗಾಳಿಯಲ್ಲಿರುವ ಆಮ್ಲಜನಕಕ್ಕೆ ಒಡ್ಡಿಕೊಳ್ಳುತ್ತದೆ. ಅದರಿಂದ ಕಿಣ್ವಗಳು ಬಿಡುಗಡೆಯಾಗಿ ಸೇಬು ಆಕ್ಸಿಡೀಕರಣಗೊಂಡು ತನ್ನ ಬಣ್ಣ ಬದಲಿಸುತ್ತದೆ.
ಕತ್ತರಿಸಿದ ಸೇಬುಗಳು ಕಪ್ಪಾಗುವುದನ್ನು ತಡೆಯಲು ನೀವು ಅವುಗಳ ಮೇಲೆ ನಿಂಬೆ ರಸ ಅಥವಾ ಕಿತ್ತಳೆ ರಸವನ್ನು ಸಿಂಪಡಿಸಬೇಕು. ಸಿಟ್ರಿಕ್ ಆಮ್ಲವು ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಲ್ಲಿಸುವ ಮೂಲಕ ಕತ್ತರಿಸಿದ ಹಣ್ಣುಗಳು ಕಪ್ಪಾಗುವುದನ್ನು ತಡೆಯುತ್ತದೆ. ಕತ್ತರಿಸಿದ ಸೇಬುಗಳನ್ನು ಹುಳಿ ಹಣ್ಣಿನ ರಸದಲ್ಲಿ ಅದ್ದಬಹುದು. ಹೀಗೆ ಮಾಡುವುದರಿಂದ ಸೇಬಿನ ರುಚಿಯ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು ಆದರೆ ನಿಮ್ಮ ಸೇಬು ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ.
ನೀವು ಕತ್ತರಿಸಿದ ಸೇಬುಗಳನ್ನು ಸ್ವಲ್ಪ ಸಮಯದವರೆಗೆ ಉಪ್ಪುಸಹಿತ ನೀರಿನಲ್ಲಿ ಇರಿಸಿ. ಸೇಬುಗಳು ಚೆನ್ನಾಗಿ ನೆನೆಸಿದ ನಂತರ, ಅವುಗಳನ್ನು ಟ್ಯಾಪ್ ನೀರಿನಿಂದ ತೊಳೆಯಿರಿ, ಇದರಿಂದ ಸೇಬುಗಳು ಹೆಚ್ಚು ಉಪ್ಪಿನ ರುಚಿಯನ್ನು ಹೊಂದುವುದಿಲ್ಲ.
ಸೇಬು ಅಥವಾ ಯಾವುದೇ ಹಣ್ಣನ್ನು ಕತ್ತರಿಸಿದ ತಕ್ಷಣ ತಿನ್ನಲು ಬಯಸದಿದ್ದರೆ, ಬಿಗಿಯಾದ ರಬ್ಬರ್ ಬ್ಯಾಂಡ್ನಿಂದ ಕಟ್ಟಿಕೊಳ್ಳಿ. ಇದರಿಂದ ಗಾಳಿಯು ಹಣ್ಣಿನ ತುಂಡುಗಳಿಗೆ ಪ್ರವೇಶಿಸುವುದಿಲ್ಲ. ಇದು ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಹಣ್ಣುಗಳು ಬೇಗನೆ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ.