

ಬೆಂಗಳೂರು: ಶ್ರಾವಣ ಮಾಸ ಆರಂಭದೊಂದಿಗೆ ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯಾಗಲಿದ್ದು, ಸತತ ನಾಲ್ಕೈದು ದಿನಗಳವರೆಗೆ ವರ್ಷಧಾರೆ ಸುರಿಯಲಿದೆ.
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕರಾವಳಿ ಭಾಗದಲ್ಲೂ ಹೆಚ್ಚು ಮಳೆಯಾಗಿಲ್ಲ. ಇದರಿಂದಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಪಾತ್ರದಲ್ಲಿ ನೀರಿನ ಕೊರತೆ ಉಂಟಾಗಿದೆ. ಕರಾವಳಿ ಮಟ್ಟಿಗೆ ಮುಂಗಾರು ಶ್ರಾವಣದೊಂದಿಗೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚು ವರ್ಷಧಾರೆಯಾಗುವುದೆಂದು ನಿರೀಕ್ಷಿಸಲಾಗಿದೆ.
ಈ ಮುಂಗಾರು ಅವಧಿಯಲ್ಲಿ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಕರಾವಳಿ ಭಾಗದಲ್ಲಿ ಸರಾಸರಿ ಶೇ.2 ಪ್ರಮಾಣದಷ್ಟು ಕಡಿಮೆ ಮಳೆಯಾಗಿದೆ. ಇದರ ಹೊರತಾಗಿಯೂ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಹೆಚ್ಚಿನ ವರ್ಷಧಾರೆಯಾಗಿದೆ.
ಪ್ರಸ್ತುತ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನೂ ಒಂದು ವಾರ ಕಾಲ ಇದೇ ರೀತಿಯ ವಾತಾವರಣ ಇರಲಿದ್ದು, ಈ ವಾರಾಂತ್ಯದ ಬಳಿಕವಷ್ಟೇ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.